ಬೆಂಗಳೂರು : ಬೆಂಗಳೂರಿನ ಕಂಟೋನ್ಮೆಂಟ್ ಹಾಗೂ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ರಾಜ್ಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರ ಪ್ರತಿಭಟನೆ ವೇಳೆ ತೀವ್ರ ಹೈಡ್ರಾಮಾ ನಡೆದಿದೆ. ಕಚೇರಿ ಮುಂದೆ ಬಂದ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ವಿರುದ್ದ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಪಕ್ಷ ದೇಶ ವಿರೋಧಿ ಪಕ್ಷ, ನಮ್ಮ ಮೇಲೆ ಮೊಟ್ಟೆಗಳಿಂದ ಹಲ್ಲೆ ಮಾಡಿದೆ. ಲಾಂಗು-ಮಚ್ಚು ಹಿಡಿದುಕೊಂಡು ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್‌ನವರು ಕಚೇರಿಯಲ್ಲೇ ಲಾಂಗು-ಮಚ್ಚು ಇಟ್ಟುಕೊಂಡಿದ್ದಾರೆ ಎಂದು ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ನಮ್ಮನ್ನು ಕೊಲೆ ಮಾಡುವ ಪ್ರಯತ್ನ ನಡೆದಿದೆ ಎಂದು ಈಗಾಗಲೇ ದೂರು ನೀಡಿದ್ದೇವೆ. 10 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಕೊತ್ವಾಲ್ ಗ್ಯಾಂಗ್‌ನಿಂದ ನಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿರುವ ಅವರು, ಈ ಸರ್ಕಾರ ಇವತ್ತಿನಿಂದ ಕೊತ್ವಾಲ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮಗೆ ಪ್ರತಿಭಟನೆ ಮಾಡಲು ಅಧಿಕಾರ ಇಲ್ಲವೇ ಎಂದು ಪ್ರಶ್ನಿಸಿರುವ ಆರ್. ಅಶೋಕ್, ಈ ಗೂಂಡಾ ಸರ್ಕಾರದ ವಿರುದ್ಧ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ದೆಹಲಿಯಿಂದಲೇ ಡಿ.ಕೆ. ಶಿವಕುಮಾರ್ ಕರೆ ಮಾಡಿ ಸಂದೇಶ ನೀಡಿರಬೇಕು. ಅದಕ್ಕಾಗಿಯೇ ಪೊಲೀಸರು ಕೂಡ ಹಲ್ಲೆ ತಡೆಯಲಿಲ್ಲ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ.
ಇದನ್ನೂ ಓದಿ : KPCC ಕಚೇರಿಗೆ ಬಿಜೆಪಿ ಮುತ್ತಿಗೆ ಯತ್ನ – ಶಾಸಕ ಬಿಪಿ ಹರೀಶ್ ತಲೆಗೆ ಮೊಟ್ಟೆ ಎಸೆದ ‘ಕೈ’ ಕಾರ್ಯಕರ್ತರು


















