ಬೆಂಗಳೂರು : ದೆಹಲಿಯಲ್ಲಿ ನೀಟ್ ಪರೀಕ್ಷೆ ಅಕ್ರಮದ ವಿರುದ್ದ ಹೋರಾಟಗಳು ನಡೆಯುತ್ತಿದ್ದರೆ ಇತ್ತ ಕರ್ನಾಟದಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ವಿಚಾರವಾಗಿ ಭಾರೀ ಜಟಾಪಟಿ ಶುರುವಾಗಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಹರಿಹರದ ಬಿಜೆಪಿ ಶಾಸಕ ಬಿಪಿ ಹರೀಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದ ಪ್ರಸಂಗ ನಡೆದಿದೆ.

ಮಾಹಿತಿಗಳ ಪ್ರಕಾರ, ಶಾಸಕರ ಮೊಬೈಲಿಗೆ ಪ್ರತಿಭಟನೆ ಸ್ಥಳದ ಲೋಕೇಶನ್ ಕಳುಹಿಸಲಾಗಿತ್ತು. ಈ ಲೋಕೇಶನ್ ಆಧಾರದ ಮೇಲೆ ಬಿಪಿ ಹರೀಶ್ ಚಾಲಕ ಕ್ವೀನ್ಸ್ ರೋಡ್ ಬಳಿ ಹರೀಶ್ ಅವರನ್ನು ಬಿಟ್ಟಿದ್ದಾನೆ. ಹರೀಶ್ ಅವರು ಕಾರಿನಿಂದ ಇಳಿದ ಕೂಡಲೇ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಮೊಟ್ಟೆ ಎಸೆದಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸರು ಬಿಪಿ ಹರೀಶ್ ಅವರನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ : ನೀಟ್ ವಿವಾದ : ಬೆಂಗಳೂರಲ್ಲಿ ಭಾರೀ ಹೈಡ್ರಾಮಾ.. ಬಿಜೆಪಿ ಕಚೇರಿ ಮುತ್ತಿಗೆಗೆ ಕಾಂಗ್ರೆಸ್ ಯತ್ನ!



















