ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೈಬ್ರಿಡ್ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಗ್ರಾಹಕರು ಕೂಡ ಈ ಹೊಸ ತಂತ್ರಜ್ಞಾನದತ್ತ ಒಲವು ತೋರುತ್ತಿದ್ದಾರೆ. ಒಂದು ಕಾಲದಲ್ಲಿ ಕೇವಲ ಅತ್ಯಂತ ದುಬಾರಿ ಐಷಾರಾಮಿ ಕಾರುಗಳಿಗೆ ಮಾತ್ರ ಸೀಮಿತವಾಗಿದ್ದ ಈ ಹೈಬ್ರಿಡ್ ವ್ಯವಸ್ಥೆಯು, ಈಗ ನಿಧಾನವಾಗಿ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗುವತ್ತ ಸಾಗುತ್ತಿದೆ.
ಭಾರತೀಯ ಮಾರುಕಟ್ಟೆಯ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಪ್ರಮುಖ ಕಾರು ತಯಾರಕ ಬ್ರ್ಯಾಂಡ್ಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿವೆ. ಈ ನಿಟ್ಟಿನಲ್ಲಿ, ಇದೇ ಜುಲೈ ತಿಂಗಳಲ್ಲಿ ಮೂರು ವಿಭಿನ್ನ ರೀತಿಯ ಹೈಬ್ರಿಡ್ ತಂತ್ರಜ್ಞಾನಗಳನ್ನು ಒಳಗೊಂಡ ಅತ್ಯಾಕರ್ಷಕ ಎಸ್ಯುವಿಗಳು ಮತ್ತು ಪಿಕ್-ಅಪ್ ಟ್ರಕ್ಗಳು ಭಾರತದಲ್ಲಿ ಅನಾವರಣಗೊಳ್ಳಲು ಹಾಗೂ ಬಿಡುಗಡೆಯಾಗಲು ಸಜ್ಜಾಗಿವೆ.
ಎಂಜಿ ಹೆಕ್ಟರ್ ಹಾಕ್ (ಪ್ಲಗ್-ಇನ್ ಹೈಬ್ರಿಡ್)
ಎಂಜಿ ಮೋಟಾರ್ಸ್ ತನ್ನ ಮುಂಬರುವ ಹೊಚ್ಚಹೊಸ ಎಸ್ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಗಣನೀಯ ಬದಲಾವಣೆಗಳೊಂದಿಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಹೊಸ ಮಾದರಿಗೆ ‘ಹೆಕ್ಟರ್ ಹಾಕ್’ ಎಂದು ನಾಮಕರಣ ಮಾಡುವ ನಿರೀಕ್ಷೆಯಿದ್ದು, ಜುಲೈ 16ರಂದು ಅಧಿಕೃತವಾಗಿ ಅನಾವರಣಗೊಳ್ಳುವ ಸಾಧ್ಯತೆಯಿದೆ. ಟಿಯಾನ್ಯು ಆರ್ಕಿಟೆಕ್ಚರ್ನ ಡಿ-ಪ್ಲಾಟ್ಫಾರ್ಮ್ ಆಧಾರದ ಮೇಲೆ ನಿರ್ಮಾಣವಾಗಿರುವ ಈ ಎಸ್ಯುವಿಯನ್ನು ಆರಂಭದಲ್ಲಿ ಫ್ಲಗ್-ಇನ್ ಹೈಬ್ರಿಡ್ (ಪಿಎಚ್ಇವಿ) ಮಾದರಿಯಲ್ಲಿ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ.
ಈ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 20.5 ಕಿಲೋವ್ಯಾಟ್ ಬ್ಯಾಟರಿ ಮತ್ತು ಮುಂಭಾಗದಲ್ಲಿ ಮೋಟಾರ್ ಅಳವಡಿಸಲಾಗಿದ್ದು, ಒಟ್ಟಾರೆಯಾಗಿ ಇದು 197 ಹೆಚ್ಪಿ ಪವರ್ ಹಾಗೂ 230 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊರಗಿನ ವಿದ್ಯುತ್ ಮೂಲದಿಂದ ಬ್ಯಾಟರಿಯನ್ನು ನೇರವಾಗಿ ಚಾರ್ಜ್ ಮಾಡಲು ಇದರಲ್ಲಿ ಚಾರ್ಜಿಂಗ್ ಪೋರ್ಟ್ ಒದಗಿಸಲಾಗಿದೆ.
ಇದು ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ ಇ-ವಿ ಮೋಡ್ನಲ್ಲಿಯೇ 100 ಕಿಲೋಮೀಟರ್ಗಳಿಗೂ ಹೆಚ್ಚು ದೂರ ಚಲಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಬ್ಯಾಟರಿ ಛಾರ್ಜ್ ಕಡಿಮೆಯಾದರೆ ಆಂತರಿಕ ಎಂಜಿನ್ ಸ್ವಯಂಚಾಲಿತವಾಗಿ ಕಾರ್ಯಾರಂಭ ಮಾಡಿ ಬ್ಯಾಟರಿಯನ್ನು ಛಾರ್ಜ್ ಮಾಡುತ್ತದೆ ಹಾಗೂ ಅಗತ್ಯವಿದ್ದಾಗ ಹೆಚ್ಚಿನ ವೇಗಕ್ಕಾಗಿ ಎಂಜಿನ್ ನೆರವು ನೀಡುತ್ತದೆ. ಇದು 12.8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು 8.8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ಟೊಯೋಟಾ ಹೈಲಕ್ಸ್ ಎಂ-ಹೆಚ್ಇವಿ (ಮೈಲ್ಡ್ ಹೈಬ್ರಿಡ್)
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಫಾರ್ಚೂನರ್ ಮೂಲಕ ಮೈಲ್ಡ್ ಹೈಬ್ರಿಡ್ (ಎಮ್ಹೆಚ್ಇವಿ) ತಂತ್ರಜ್ಞಾನವನ್ನು ಪರಿಚಯಿಸಿರುವ ಟೊಯೋಟಾ, ಈಗ ತನ್ನ ಜನಪ್ರಿಯ ಪಿಕ್-ಅಪ್ ಟ್ರಕ್ ಆದ ಹೊಸ ತಲೆಮಾರಿನ ‘ಹೈಲಕ್ಸ್’ ಅನ್ನು ಇದೇ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಜುಲೈ 28ರಂದು ಈ ಹೊಸ ವಾಹನ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಮೈಲ್ಡ್ ಹೈಬ್ರಿಡ್ ವ್ಯವಸ್ಥೆಯು ಎಂಜಿನ್ಗೆ ಕಡಿಮೆ ಆರ್ಪಿಎಂಗಳಲ್ಲಿ ನೆರವು ನೀಡುವ ಮೂಲಕ ಇಂಧನ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದು ಸಂಪೂರ್ಣವಾಗಿ ಇ-ವಿ ಮೋಡ್ನಲ್ಲಿ ಕಾರ್ಯನಿರ್ವಹಿಸದಿದ್ದರೂ, ಎಂಜಿನ್ ಮೇಲಿನ ಒತ್ತಡವನ್ನು ಗಮನನೀಯವಾಗಿ ಕಡಿಮೆ ಮಾಡುತ್ತದೆ. ಈ ಹೊಸ ಹೈಲಕ್ಸ್ 2.8-ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, 48 ವೋಲ್ಟ್ ಮೈಲ್ಡ್ ಹೈಬ್ರಿಡ್ ಸಿಸ್ಟಮ್ನೊಂದಿಗೆ 201 ಬಿಹೆಚ್ಪಿ ಪವರ್ ಹಾಗೂ ಭರ್ಜರಿ 500 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಸಂಪೂರ್ಣ ಹೊಸ ವಿನ್ಯಾಸದ ಅಪ್ಡೇಟೆಡ್ ಐಎಂವಿ ಪ್ಲಾಟ್ಫಾರ್ಮ್ ಆಧಾರಿತವಾಗಿರುವ ಕಾರಣ ಈ ಆವೃತ್ತಿಯು ಅಸ್ತಿತ್ವದಲ್ಲಿರುವ ಮಾದರಿಗಿಂತ ತುಸು ದುಬಾರಿಯಾಗುವ ಸಾಧ್ಯತೆಯಿದೆ.
ಹೋಂಡಾ ಝೆಡ್ಆರ್-ವಿ (ಸ್ಟ್ರಾಂಗ್ ಹೈಬ್ರಿಡ್)
ಹೋಂಡಾ ಇತ್ತೀಚೆಗಷ್ಟೇ ತನ್ನ ಮುಂಬರುವ ಪ್ರೀಮಿಯಂ ಎಸ್ಯುವಿ ಝೆಡ್ಆರ್-ವಿ ಹೈಬ್ರಿಡ್ ಅನ್ನು ಅನಾವರಣಗೊಳಿಸಿದ್ದು, ಜುಲೈ ತಿಂಗಳಲ್ಲಿ ಇದರ ಬೆಲೆ ಘೋಷಣೆ ಹಾಗೂ ವಿತರಣೆಗಳು ಆರಂಭವಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಹೋಂಡಾದ ಫ್ಲ್ಯಾಗ್ಶಿಪ್ ಎಸ್ಯುವಿಯಾಗಿ ಹೊರಹೊಮ್ಮಲಿರುವ ಈ ಕಾರು, ಅತ್ಯಾಧುನಿಕ ವೈಶಿಷ್ಟ್ಯಗಳಾದ 9-ಇಂಚಿನ ಟಚ್ಸ್ಕ್ರೀನ್, 12-ಸ್ಪೀಕರ್ ಬೋಸ್ ಆಡಿಯೋ ಸಿಸ್ಟಮ್, ವೆಂಟಿಲೇಟೆಡ್ ಸೀಟ್ಗಳು, 11 ಏರ್ಬ್ಯಾಗ್ಗಳು, 360-ಡಿಗ್ರಿ ಕ್ಯಾಮೆರಾ, ಎಡಿಎಎಸ್ (ಹೋಂಡಾ ಸೆನ್ಸಿಂಗ್) ಹಾಗೂ ಪನೋರಮಿಕ್ ಸನ್ರೂಫ್ನಂತಹ ಅತ್ಯಾಕರ್ಷಕ ಸೌಲಭ್ಯಗಳನ್ನು ಒಳಗೊಂಡಿರಲಿದೆ.
ಈ ಹೊಸ ಝೆಡ್ಆರ್-ವಿ 2.0-ಲೀಟರ್ ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಜೊತೆಗೆ ಹೋಂಡಾದ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಮ್ ಹೊಂದಿದೆ, ಇದು 184 ಪಿಎಸ್ ಪವರ್ ಮತ್ತು 315 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಕೇವಲ 7.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು ಮತ್ತು 22.80 ಕಿಲೋಮೀಟರ್ ಮೈಲೇಜ್ ನೀಡುವ ಭರವಸೆಯನ್ನು ನೀಡಲಾಗಿದೆ. ಇತರ ಸ್ಟ್ರಾಂಗ್ ಹೈಬ್ರಿಡ್ ಕಾರುಗಳಂತೆಯೇ ಇದು ಸಣ್ಣ ದೂರದ ಪ್ರಯಾಣಕ್ಕಾಗಿ ಸ್ವತಂತ್ರವಾಗಿ ಎಲೆಕ್ಟ್ರಿಕ್ ಮೋಡ್ನಲ್ಲಿ ಚಲಿಸಬಲ್ಲದು, ಬ್ಯಾಟರಿ ಮುಗಿದ ತಕ್ಷಣ ತಡೆರಹಿತವಾಗಿ ಮತ್ತೆ ಪೆಟ್ರೋಲ್ ಎಂಜಿನ್ಗೆ ಬದಲಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬ್ಯಾಟರಿಯನ್ನು ತಾನಾಗಿಯೇ ಚಾರ್ಜ್ ಮಾಡಿಕೊಳ್ಳುತ್ತದೆ.
ಇದನ್ನೂ ಓದಿ : ಕಾರಲ್ಲಿ ಇಂಧನ ಉಳಿತಾಯ ತಂತ್ರಜ್ಞಾನ ಬಳಸಿದ್ರೆ ಆಟೋಮೊಬೈಲ್ ಕಂಪನಿಗಳಿಗೆ ರಿವಾರ್ಡ್ : ಕೆಫೆ-3 ಕರಡು ನಿಯಮ ಪ್ರಕಟ!



















