ಮುಂಬೈ : ಫ್ರಿಡ್ಜ್ ಮರ್ಡರ್ ಎಂದೇ ಕುಖ್ಯಾತಿ ಗಳಿಸಿರುವ ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನು ನೆನಪಿಸುವಂತಹ ಅತ್ಯಂತ ಭೀಕರ ಹಾಗೂ ನಡುಕ ಹುಟ್ಟಿಸುವ ಹತ್ಯೆ ಪ್ರಕರಣವೊಂದು ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಲ್ಯಾಣ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಯುವಕನೊಬ್ಬನನ್ನು ಹತ್ಯೆಗೈದು, ಆತನ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಬಾತ್‌ರೂಮ್‌ನಲ್ಲಿದ್ದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ತುರುಕಿ ಇಟ್ಟ ಘಟನೆ ನಡೆದಿದೆ. ಹತ್ಯೆ ಬಳಿಕ ಕೊಲೆಗಾರ್ತಿ ಪ್ರೇಯಸಿ ಬಾತ್‌ರೂಮ್‌ನಲ್ಲಿ ನಲ್ಲಿ ನೀರನ್ನು ಹರಿಯಲು ಬಿಟ್ಟು ಕೋಲ್ಕತ್ತಾಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ದುರ್ವಾಸನೆ ಬಂದಾಗ ಬೆಳಕಿಗೆ ಬಂದ ಭೀಕರ ಕೃತ್ಯ
ಮಲಾಂಗ್ ರಸ್ತೆಯಲ್ಲಿರುವ ನೀಲಕಂಠ ಸೊಸೈಟಿಯ ಬೀಗ ಹಾಕಿದ್ದ ಫ್ಲಾಟ್ ಒಂದರಿಂದ ಕಳೆದ 2-3 ದಿನಗಳಿಂದ ವಿಪರೀತ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ತಕ್ಷಣ ಮಾನ್‌ಪಾಪಾ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ಬಾತ್‌ರೂಮ್‌ನಲ್ಲಿದ್ದ ದೊಡ್ಡ ಡ್ರಮ್ ಒಳಗೆ ಚೀಲವೊಂದು ಪತ್ತೆಯಾಗಿದೆ. ಅದನ್ನು ಬಿಚ್ಚಿ ನೋಡಿದಾಗ ಯುವಕನ ಅರೆಬರೆ ಕೊಳೆತ, ತುಂಡರಿಸಲ್ಪಟ್ಟ ದೇಹದ ಭಾಗಗಳು ಪತ್ತೆಯಾಗಿದ್ದು, ಇಡೀ ಅಪಾರ್ಟ್‌ಮೆಂಟ್ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಸಾಕ್ಷ್ಯ ನಾಶಕ್ಕೆ ನಲ್ಲಿ ಆನ್ ಮಾಡಿಟ್ಟಿದ್ದಳು
ಪ್ರಾಥಮಿಕ ತನಿಖೆಯ ಪ್ರಕಾರ, ಹಂತಕಿಯು ಹರಿತವಾದ ಆಯುಧದಿಂದ ಪ್ರಿಯಕರನನ್ನು ಕೊಚ್ಚಿ ಕೊಲೆ ಮಾಡಿ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿದ್ದಾಳೆ. ತದನಂತರ ರಕ್ತದ ಕಲೆಗಳು ಮತ್ತು ಫೊರೆನ್ಸಿಕ್ ಸಾಕ್ಷ್ಯಗಳು ಕೊಚ್ಚಿ ಹೋಗಲಿ ಹಾಗೂ ಮೃತದೇಹ ಬೇಗ ಕೊಳೆಯಲಿ ಎಂಬ ದುಷ್ಟ ಆಲೋಚನೆಯಿಂದ ಬಾತ್‌ರೂಮ್‌ನ ನಲ್ಲಿಯನ್ನು ಆನ್ ಮಾಡಿ ಹರಿಯಲು ಬಿಟ್ಟಿದ್ದಾಳೆ. ಇಷ್ಟೇ ಅಲ್ಲದೆ, ಪರಾರಿಯಾಗುವ ಮೊದಲು ಮನೆ ಮಾಲೀಕನಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದ ಆಕೆ, “ಬಾತ್‌ರೂಮ್‌ನಲ್ಲಿ ಮೃತದೇಹ ಬಿದ್ದಿದೆ ಮತ್ತು ನಲ್ಲಿ ನೀರು ಹರಿಯುತ್ತಿದೆ” ಎಂದು ತಿಳಿಸಿದ್ದಳು. ಈ ಆಡಿಯೋ ಸಂದೇಶವೇ ಪೊಲೀಸರು ಕೊಲೆಯನ್ನು ಶೀಘ್ರವಾಗಿ ಪತ್ತೆಹಚ್ಚಲು ಪ್ರಮುಖ ಸುಳಿವಾಗಿದೆ.
ಆರೋಪಿ ಪತ್ತೆಗೆ ಕೋಲ್ಕತ್ತಾಗೆ ಧಾವಿಸಿದ ಪೊಲೀಸ್ ಪಡೆ
ಮಾನ್‌ಪಾಡಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪರಾರಿಯಾಗಿರುವ ಆರೋಪಿ ಮಹಿಳೆಯನ್ನು ಬಂಧಿಸಲು ದೆಹಲಿ ಮತ್ತು ಮಹಾರಾಷ್ಟ್ರ ಪೊಲೀಸರ ವಿಶೇಷ ತಂಡ ಕೋಲ್ಕತ್ತಾಗೆ ತೆರಳಿದೆ. ಪ್ರೇಮ ವೈಫಲ್ಯ ಅಥವಾ ಪೂರ್ವನಿಯೋಜಿತ ಸಂಚಿನಿಂದ ಈ ಕೊಲೆ ನಡೆದಿದೆಯೇ ಎಂಬಿತ್ಯಾದಿ ಕೋನಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : “ಅದು 28 ವರ್ಷದ ಯುವಕರ ಸಾಧನೆ, 56 ವರ್ಷದ ‘ಯುವಕ’ನದ್ದಲ್ಲ” : ರಾಹುಲ್ ಗಾಂಧಿಗೆ ಮೋದಿ ಟಾಂಗ್!


















