ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ನೆರಳಾಗಿ, ಸುದೀರ್ಘ ರಾಜಕೀಯ ಏಳುಬೀಳುಗಳ ಪಯಣದಲ್ಲಿ ಸದಾ ಜೊತೆಯಾಗಿ ನಿಂತಿದ್ದ ಅವರ ಧರ್ಮಪತ್ನಿ ಚೆನ್ನಮ್ಮ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರುತ್ತಿದೆ.
ಬರೋಬ್ಬರಿ ಏಳು ದಶಕಗಳ ಕಾಲ ದೇವೇಗೌಡರ ಜೊತೆ ಸಾರ್ಥಕ ದಾಂಪತ್ಯ ಜೀವನವನ್ನು ನಡೆಸಿದ ಚೆನ್ನಮ್ಮ ಅವರು, ಇದೀಗ ದೊಡ್ಡಗೌಡರನ್ನು ಒಬ್ಬಂಟಿ ಮಾಡಿ ಅನಂತ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಈ ದುಃಖದ ಸಂದರ್ಭದಲ್ಲಿ ದೇವೇಗೌಡರು ಮತ್ತು ಚೆನ್ನಮ್ಮ ಅವರ ಅಪೂರ್ವ ಪ್ರೀತಿ ಹಾಗೂ ದಾಂಪತ್ಯದ ಕೊನೆಯ ದಿನಗಳ ಅತ್ಯಂತ ಭಾವುಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೋಡುಗರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಚೆನ್ನಮ್ಮ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವಾಗ ಹೆಚ್.ಡಿ. ದೇವೇಗೌಡರು ತಾವೇ ಸ್ವತಃ ಕೈಯಾರೆ ಪತ್ನಿಗೆ ಪ್ರೀತಿಯಿಂದ ಊಟ ಮಾಡಿಸುತ್ತಿರುವ ದೃಶ್ಯವಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಮೇಲಿನ ಕಾಳಜಿಯಿಂದ ಗೌಡರು ಅತ್ಯಂತ ಮಮತೆಯಿಂದ ತುತ್ತು ನೀಡುತ್ತಿದ್ದರೆ, ಚೆನ್ನಮ್ಮ ಅವರು ಕಿರುಧ್ವನಿಯಲ್ಲಿ ‘ನನಗೆ ಸಾಕು’ ಎಂದು ಹೇಳುತ್ತಿದ್ದಾರೆ. ಇದಕ್ಕೆ ದೇವೆಗೌಡರು ನಾನು ನಿನ್ನ ಜೊತೆ ಇರ್ಬೇಕೋ ಬೇಡ್ವೋ? ಇದು ಕೊನೇ ತುತ್ತು ತಿನ್ನು ತಿನ್ನು ಎನ್ನುತ್ತಾರೆ. ಈ ವೇಳೆ ಮರು ಮಾತಾಡದೇ ಚೆನ್ನಮ್ಮ ಅವರು ಗೌಡರು ಕೊಟ್ಟ ತುತ್ತು ತಿನ್ನುತ್ತಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ನಿಜಕ್ಕೂ ಮನ ಮಿಡಿಯುವಂತಿದೆ.
ಇದನ್ನೂ ಓದಿ : ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅಂತ್ಯಕ್ರಿಯೆ!


















