ಶ್ರೀಹರಿಕೋಟ : ಭಾರತದ ಬಾಹ್ಯಾಕಾಶ ರಂಗದಲ್ಲಿ ಇಂದು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಘಟನೆಯೊಂದು ಜರುಗಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿರುವ ಭಾರತದ ಮೊಟ್ಟ ಮೊದಲ ಖಾಸಗಿ ರಾಕೆಟ್ ವಿಕ್ರಮ್-1 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ್ ಸಾರಾಭಾಯಿ ಅವರ ಗೌರವಾರ್ಥವಾಗಿ ಈ ರಾಕೆಟ್ಗೆ ವಿಕ್ರಮ್ 1 ಎಂದು ಹೆಸರಿಡಲಾಗಿದೆ. ಇದು ಯಶಸ್ವಿಯಾಗಿ ಭೂಮಿಯ ಕಕ್ಷೆ ತಲುಪಿದರೆ, ಬಾಹ್ಯಾಕಾಶಕ್ಕೆ ರಾಕೆಟ್ ಕಳುಹಿಸಿದ ವಿಶ್ವದ ಬೆರಳೆಣಿಕೆಯಷ್ಟು ಗಣ್ಯ ಖಾಸಗಿ ಕಂಪನಿಗಳ ಸಾಲಿಗೆ ಭಾರತದ ಸ್ಕೈರೂಟ್ ಸಂಸ್ಥೆ ಸೇರಲಿದೆ.
ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಮೂರು ಹಂತದ (3-Stage) ರಾಕೆಟ್ ಆಗಿದೆ. ಇದರ ಎತ್ತರ ಸುಮಾರು 23 ಮೀಟರ್ ಹಾಗೂ ವ್ಯಾಸ 1.7 ಮೀಟರ್ ಇದೆ.ಇದು ಸಣ್ಣ ಗಾತ್ರದ ಹಾಗೂ ವಾಣಿಜ್ಯ ಬಳಕೆಯ ಸುಮಾರು 300 ಕೆಜಿ ತೂಕದ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಅತ್ಯಂತ ನಿಖರವಾಗಿ ತಲುಪಿಸುವ ಸಾಮರ್ಥ್ಯ ಹೊಂದಿದೆ.ಬಾಹ್ಯಾಕಾಶ ವಿಜ್ಞಾನದಲ್ಲಿ ಕಕ್ಷೆ ತಲುಪುವುದು ಅತ್ಯಂತ ಕಠಿಣ ಇಂಜಿನಿಯರಿಂಗ್ ಸಾಧನೆ. ರಾಕೆಟ್ ಗಂಟೆಗೆ ಬರೋಬ್ಬರಿ 28,000 ಕಿಲೋಮೀಟರ್ ವೇಗವನ್ನು ಸಾಧಿಸಬೇಕಾಗುತ್ತದೆ. ಜೊತೆಗೆ ನಿಖರವಾದ ಸಂಚರಣೆ ಮತ್ತು ವಿವಿಧ ಹಂತಗಳ ಬೇರ್ಪಡಿಕೆ ಪ್ರಕ್ರಿಯೆಗಳು ಏಕಕಾಲದಲ್ಲಿ ಸೆಕೆಂಡಿನ ನೂರನೇ ಒಂದು ಭಾಗದಷ್ಟು ನಿಖರತೆಯಲ್ಲಿ ನಡೆಯಬೇಕಾಗುತ್ತದೆ.
ಈ ಇಡೀ ಸಾಧನೆಯ ಹಿಂದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಜಿ ವಿಜ್ಞಾನಿಗಳ ಪರಿಶ್ರಮವಿದೆ. ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಚಂದ್ನಾ ಮತ್ತು ನಾಗಾ ಭರತ್ ಡಾಕಾ ಎಂಬ ಇಬ್ಬರು ಯುವ ವಿಜ್ಞಾನಿಗಳು 2018 ರಲ್ಲಿ ಇಸ್ರೋ ಕೆಲಸ ಬಿಟ್ಟು ‘ಸ್ಕೈರೂಟ್ ಏರೋಸ್ಪೇಸ್’ ಕಂಪನಿಯನ್ನು ಸ್ಥಾಪಿಸಿದರು.
ಇಂದು ಈ ಕಂಪನಿಯ ಒಟ್ಟು ಮೌಲ್ಯ ಸುಮಾರು 1.1 ಬಿಲಿಯನ್ ಡಾಲರ್ (9,000 ಕೋಟಿ ರೂ.ಗೂ ಅಧಿಕ) ದಾಟಿದೆ. ಈ ರಾಕೆಟ್ ಉಡಾವಣೆಗೆ ಇಸ್ರೋ ತನ್ನ ಉಡಾವಣಾ ಕೇಂದ್ರ, ತಾಂತ್ರಿಕ ನೆರವು ಹಾಗೂ ಪರೀಕ್ಷಾ ಮೂಲಸೌಕರ್ಯಗಳನ್ನು ಮುಕ್ತವಾಗಿ ನೀಡುವ ಮೂಲಕ ಖಾಸಗಿ ಸಹಭಾಗಿತ್ವಕ್ಕೆ ದೊಡ್ಡ ಉದಾಹರಣೆಯಾಗಿ ನಿಂತಿದೆ. ಕಂಪನಿಯು ಈಗಾಗಲೇ 2022 ರ ನವೆಂಬರ್‌ನಲ್ಲಿ ‘ವಿಕ್ರಮ್-ಎಸ್’ ಎಂಬ ಸಣ್ಣ ಉಪ-ಕಕ್ಷೆಯ ರಾಕೆಟ್ ಅನ್ನು ಪ್ರಾಯೋಗಿಕವಾಗಿ ಹಾರಿಸಿ ಯಶಸ್ವಿಯಾಗಿತ್ತು.ವಿಕ್ರಮ್-1 ರ ಇಂದಿನ ಉಡಾವಣೆಯು ಕೇವಲ ಒಂದು ರಾಕೆಟ್ ಹಾರಾಟವಲ್ಲ, ಇದರ ಹಿಂದೆ ಜಾಗತಿಕ ಆರ್ಥಿಕ ತಂತ್ರಗಾರಿಕೆ ಅಡಗಿದೆ.



















