ನವದೆಹಲಿ: ನೀಟ್ (NEET) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಖ್ಯಾತ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಇಂದು ಮುಂಜಾನೆ ದೆಹಲಿ ಪೊಲೀಸರು ಪ್ರತಿಭಟನಾ ಸ್ಥಳದಿಂದ ದಿಢೀರ್ ತೆರವುಗೊಳಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ತಜ್ಞರ ಸಲಹೆ ಹಾಗೂ ಹೈಕೋರ್ಟ್ ಆದೇಶದ ಅನ್ವಯ ಪೊಲೀಸರು ಅವರನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವಾಂಗ್ಚುಕ್ ಅವರು ಪ್ರಜ್ಞಾವಸ್ಥೆಯಲ್ಲಿದ್ದು, ಅವರ ಆರೋಗ್ಯ ಸ್ಥಿರವಾಗಿವೆ ಎಂದು ವರದಿಗಳು ತಿಳಿಸಿವೆ.
ಸೋನಮ್ ವಾಂಗ್ಚುಕ್ ಅವರ ಆರೋಗ್ಯದ ಸ್ಥಿತಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಕೆಲವೇ ಗಂಟೆಗಳ ಮುನ್ನ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಹೈಕೋರ್ಟ್, “ಪ್ರತಿಯೊಬ್ಬ ನಾಗರಿಕನ ಜೀವವೂ ಅಮೂಲ್ಯವಾದುದು” ಎಂದು ಅಭಿಪ್ರಾಯಪಟ್ಟು, ವಾಂಗ್ಚುಕ್ ಅವರ ಜೀವ ರಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ದೈನಂದಿನ ಆರೋಗ್ಯ ತಪಾಸಣೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಶುಕ್ರವಾರ ಅವರ ಆರೋಗ್ಯ ತಪಾಸಣೆ ನಡೆಸಿದ್ದ ವೈದ್ಯರು, ವಾಂಗ್ಚುಕ್ ಅವರ ಅಂಗಾಂಗಗಳು ವೈಫಲ್ಯಗೊಳ್ಳುವ ಭೀತಿ ಇದ್ದು, ಪರಿಸ್ಥಿತಿ ಗಂಭೀರ ಹಂತ ತಲುಪಿದೆ ಎಂದು ಎಚ್ಚರಿಸಿದ್ದರು. 59 ವರ್ಷ ವಯಸ್ಸಿನ ವಾಂಗ್ಚುಕ್ ಅವರು ಉಪವಾಸದ ಅವಧಿಯಲ್ಲಿ ಈಗಾಗಲೇ 9 ಕೆಜಿಗಿಂತಲೂ ಹೆಚ್ಚು ತೂಕ ಕಳೆದುಕೊಂಡಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ತಲ್ಲಣ
ವಾಗ್ಚುಕ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಣ್ಣ ಮಟ್ಟದ ನೂಕಾಟ ಮತ್ತು ಗದ್ದಲ ಉಂಟಾಗಿದೆ. ಆದರೆ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿ, ವಾಂಗ್ಚುಕ್ ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಇದೇ ವೇಳೆ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಂತರ್ ಮಂತರ್ ಪ್ರತಿಭಟನಾ ಸ್ಥಳವನ್ನು ಶಾಂತಿಯುತವಾಗಿ ಖಾಲಿ ಮಾಡುವಂತೆ ಪೊಲೀಸರು ಉಳಿದ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಪ್ರತಿಪಕ್ಷಗಳ ಪ್ರಮುಖ ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು. ಕಾಂಗ್ರೆಸ್‌ನ ಪವನ್ ಖೇರಾ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ವಾಂಗ್ಚುಕ್ ಅವರನ್ನು ಭೇಟಿಯಾಗಿ, ಆರೋಗ್ಯದ ದೃಷ್ಟಿಯಿಂದ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವಿ ಮಾಡಿದ್ದರು.
ಈ ನಡುವೆ, ದೇಶದಲ್ಲಿ ಶೈಕ್ಷಣಿಕ ಸುಧಾರಣೆಗಳನ್ನು ತರಬೇಕೆಂದು ಆಗ್ರಹಿಸಿ ಆನ್‌ಲೈನ್ ಸತ್ಯಾಗ್ರಹವನ್ನು ಆರಂಭಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಘಟನೆಯು ತನ್ನ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ. ಅಭಿಜೀತ್ ದಿಪ್ಕೆ ನೇತೃತ್ವದ ಈ ಸಂಘಟನೆಯು ಜುಲೈ 20ರಂದು ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಸಂಸತ್ ಭವನಕ್ಕೆ ಬೃಹತ್ ಜಾಥಾ ನಡೆಸಲು ಕರೆ ನೀಡಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಈ ಹೋರಾಟದಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದೆ.
ಇದನ್ನೂ ಓದಿ : ಚಿತೆ ಮೇಲೆ ಮಲಗಿ, ಕುತ್ತಿಗೆಗೆ ಹಗ್ಗ ಬಿಗಿದು M.Pಯ ಬುಡಕಟ್ಟು ಜನಾಂಗ ಪ್ರತಿಭಟಿಸುತ್ತಿರುವುದೇಕೆ?



















