ನವದೆಹಲಿ : ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ‘ಗಗನಯಾನ’ ಸೇರಿದಂತೆ ಪ್ರಮುಖ ದೇಶೀಯ ಬಾಹ್ಯಾಕಾಶ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಿರಿಯ ವಿಜ್ಞಾನಿಗಳು ಸರಣಿಯಾಗಿ ರಾಜೀನಾಮೆ ನೀಡುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ನುರಿತ ವಿಜ್ಞಾನಿಗಳ ಈ ದಿಢೀರ್ ನಿರ್ಗಮನದಿಂದಾಗಿ ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗದಂತೆ ತಡೆಯಲು ಬಾಹ್ಯಾಕಾಶ ಇಲಾಖೆಯು (DoS) ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿ ನಿಯಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತಷ್ಟು ಬಿಗಿಗೊಳಿಸಿದೆ.
ಇತ್ತೀಚಿನ ತಿಂಗಳುಗಳಲ್ಲಿ ಇಸ್ರೋ ಸಂಸ್ಥೆಯಿಂದ ಅನುಭವಿ ವಿಜ್ಞಾನಿಗಳು ದೊಡ್ಡ ಪ್ರಮಾಣದಲ್ಲಿ ಹೊರಹೋಗುತ್ತಿದ್ದಾರೆ. ಮೂಲಗಳ ಪ್ರಕಾರ, ಸುಮಾರು 100 ರಿಂದ 120 ಕ್ಕೂ ಹೆಚ್ಚು ತಜ್ಞ ವಿಜ್ಞಾನಿಗಳು ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರದಿಂದ (URSC) ಸುಮಾರು 80 ಹಾಗೂ ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಿಂದ (VSSC) ಸುಮಾರು 20 ವಿಜ್ಞಾನಿಗಳು ಹೊರನಡೆದಿದ್ದಾರೆ. ಇದರಲ್ಲಿ ಚಂದ್ರಯಾನ-3 ಯಶಸ್ಸಿನ ಹಿಂದಿದ್ದ ಪ್ರಮುಖ ಸಿಮ್ಯುಲೇಶನ್ ತಜ್ಞ ಆದಿತ್ಯ ರಲ್ಲಪಲ್ಲಿ ಸೇರಿದಂತೆ ಹಲವು ಪ್ರಮುಖ ಯೋಜನಾ ನಿರ್ದೇಶಕರು ಸೇರಿದ್ದಾರೆ. ನುರಿತ ತಜ್ಞರ ಈ ವಲಸೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿರುವುದರಿಂದ ಕೇಂದ್ರ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಕೇಂದ್ರ ಕಚೇರಿ ಅನುಮತಿ ಇನ್ನು ಮುಂದೆ ಕಡ್ಡಾಯ
ಬಾಹ್ಯಾಕಾಶ ಇಲಾಖೆಯು ಜುಲೈ 14 ರಂದು ಹೊರಡಿಸಿರುವ ಹೊಸ ಅಧಿಕೃತ ಜ್ಞಾಪನಾ ಪತ್ರದ ಪ್ರಕಾರ, ಗಗನಯಾನದಂತಹ ಪ್ರತಿಷ್ಠಿತ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್ ‘ಎ’ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಅಥವಾ ಸ್ವಯಂ ನಿವೃತ್ತಿ ಅರ್ಜಿಗಳನ್ನು ಇಸ್ರೋದ ಪ್ರಾದೇಶಿಕ ಕೇಂದ್ರಗಳು ಇನ್ನು ಮುಂದೆ ನೇರವಾಗಿ ಸ್ವೀಕರಿಸುವಂತಿಲ್ಲ.
2020ರಲ್ಲಿ ತರಲಾಗಿದ್ದ ಆಡಳಿತಾತ್ಮಕ ಸುಧಾರಣೆಯ ಪ್ರಕಾರ ಪ್ರಾದೇಶಿಕ ಕೇಂದ್ರಗಳ ನಿರ್ದೇಶಕರಿಗೆ ಈ ಅಧಿಕಾರ ನೀಡಲಾಗಿತ್ತು. ಆದರೆ, ಹೊಸ ನಿಯಮದನ್ವಯ ಈ ರೀತಿಯ ಎಲ್ಲಾ ಅರ್ಜಿಗಳನ್ನು ಕಡ್ಡಾಯವಾಗಿ ದೆಹಲಿಯಲ್ಲಿರುವ ಬಾಹ್ಯಾಕಾಶ ಇಲಾಖೆಯ ಅಂತಿಮ ಒಪ್ಪಿಗೆಗಾಗಿಯೇ ಕಳುಹಿಸಿಕೊಡಬೇಕಾಗುತ್ತದೆ. ಕಠಿಣ ಕಾರ್ಯಾಚರಣೆಗಳು ಪೂರ್ಣಗೊಳ್ಳುವವರೆಗೆ ವಿಜ್ಞಾನಿಗಳನ್ನು ಸಂಸ್ಥೆಯಲ್ಲೇ ಉಳಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.
ಕಾರ್ಯಾಚರಣೆಗಳಿಗೆ ಧಕ್ಕೆಯಾಗದಂತೆ ಇಸ್ರೋ ಮುನ್ನೆಚ್ಚರಿಕೆ
ಈ ವಿದ್ಯಮಾನದ ಕುರಿತು ಪ್ರತಿಕ್ರಿಯಿಸಿರುವ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು, ಯಾವುದೇ ದೊಡ್ಡ ಸಂಸ್ಥೆಯಲ್ಲಿ ನೌಕರರು ಹೊರಹೋಗುವುದು ಮತ್ತು ಹೊಸಬರು ಬರುವುದು ಸಹಜ ಪ್ರಕ್ರಿಯೆ ಎಂದು ಆತಂಕವನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಪ್ರಮುಖ ಯೋಜನೆಗಳು ದಿಢೀರನೆ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಯಾರನ್ನೂ ಬಲವಂತವಾಗಿ ಕಟ್ಟಿ ಹಾಕಲು ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಸ್ರೋದಲ್ಲಿ ಪ್ರಸ್ತುತ 14,600 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಖಾಲಿ ಇರುವ ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದಾಗ್ಯೂ, ಗಗನಯಾನ ಮತ್ತು ಭಾರತೀಯ ಬಾಹ್ಯಾಕಾಶ ನಿಲ್ದಾಣದಂತಹ ಅತ್ಯಂತ ಜಟಿಲ ಯೋಜನೆಗಳಿಗೆ ಹೊಸಬರನ್ನು ನೇಮಿಸುವುದಕ್ಕಿಂತ, ವರ್ಷಗಳ ಕಾಲ ಅನುಭವ ಪಡೆದ ವಿಜ್ಞಾನಿಗಳ ಸಾಂಸ್ಥಿಕ ಜ್ಞಾನವನ್ನು ಉಳಿಸಿಕೊಳ್ಳುವುದು ಪ್ರಸ್ತುತ ಇಸ್ರೋ ಮುಂದಿರುವ ಅತಿ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ : ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ತಮ್ಮನಿಂದ ಯುವತಿಯ ಹತ್ಯೆ.. ಇಬ್ಬರ ಬಂಧನ!



















