ವಾಷಿಂಗ್ಟನ್ : ಅಮೆರಿಕದ ಉತಾಹ್ (Utah) ಪ್ರಾಂತ್ಯದ ಶಾಪಿಂಗ್ ಮಾಲ್‌ವೊಂದರಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಮೇಲೆ ಜನಾಂಗೀಯ ಹಾಗೂ ಧಾರ್ಮಿಕ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿದೆ. ಆರೋಪಿಯು ಸಂತ್ರಸ್ತನ ಧರ್ಮವನ್ನು ಕೇಳಿ ತಿಳಿದುಕೊಂಡು, ಆತನ ಮೇಲೆ ಬರೋಬ್ಬರಿ 15 ಬಾರಿ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾನೆ. ಪ್ರಸ್ತುತ ತೀವ್ರ ರಕ್ತಸ್ರಾವದಿಂದಾಗಿ ಸಂತ್ರಸ್ತ ಯುವಕ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂತ್ರಸ್ತನ ಕುಟುಂಬಕ್ಕೆ ಅಗತ್ಯ ನೆರವು ನೀಡಲು ಧಾವಿಸಿದೆ.
ಧರ್ಮ ಕೇಳಿ ಅಮಾನವೀಯ ದಾಳಿ
ಉತಾಹ್ ಪ್ರಾಂತ್ಯದ ವೆಸ್ಟ್ ವ್ಯಾಲಿ ಸಿಟಿಯಲ್ಲಿರುವ ‘ವ್ಯಾಲಿ ಫೇರ್ ಮಾಲ್’ನ ವ್ಯಾಪಾರ ಮಳಿಗೆಯೊಂದರಲ್ಲಿ 48 ವರ್ಷದ ಪೀಟರ್ ಮೈಕೆಲ್ ಲಾರ್ಸನ್ ಎಂಬಾತ ಈ ದ್ವೇಷದ ಕೃತ್ಯವೆಸಗಿದ್ದಾನೆ. ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಸೊಹೈಲ್ ಎಂಬ ಯುವಕನ ಬಳಿ ಬಂದ ಲಾರ್ಸನ್, ಮೊದಲು “ನೀನು ಎಲ್ಲಿಯವನು?” ಎಂದು ಕೇಳಿದ್ದಾನೆ. ಅದಕ್ಕೆ ಸೊಹೈಲ್ “ನಾನು ಭಾರತದವನು, ನನ್ನ ಹೆಸರು ಸೊಹೈಲ್” ಎಂದು ಉತ್ತರಿಸಿದ್ದಾರೆ. ತಕ್ಷಣವೇ ಆರೋಪಿ “ನೀನು ಮುಸ್ಲಿಮನಾ?” ಎಂದು ಪ್ರಶ್ನಿಸಿದ್ದಾನೆ. ಸೊಹೈಲ್ ಹೌದು ಎನ್ನುತ್ತಿದ್ದಂತೆ, ಕುಡಿಯಲು ನೀರು ಕೇಳಿದ್ದಾನೆ. ನೀರು ನೀಡಲೆಂದು ಸೊಹೈಲ್ ತಿರುಗಿದ ತಕ್ಷಣ ಆತನ ಮೇಲೆ ಚಾಕುವಿನಿಂದ ಮನಸೋಇಚ್ಛೆ ಇರಿಯಲು ಪ್ರಾರಂಭಿಸಿದ್ದಾನೆ.
ಸಾರ್ವಜನಿಕರಿಂದ ಆರೋಪಿಯ ಬಂಧನ
ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಚೇರ್, ಶೂ ಹಾಗೂ ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ದಾಳಿಕೋರನನ್ನು ತಡೆಯಲು ಯತ್ನಿಸಿದರೂ, ಆತ ಅತ್ಯಂತ ಕ್ರೂರವಾಗಿ ಇರಿತವನ್ನು ಮುಂದುವರಿಸಿದ್ದ. ಕೊನೆಗೆ ಮಾಲ್‌ನಲ್ಲಿದ್ದ ಸಾರ್ವಜನಿಕರು ಧೈರ್ಯ ಮಾಡಿ ಆರೋಪಿಯನ್ನು ಹಿಡಿದು ನೆಲಕ್ಕೆ ತಳ್ಳಿ, ಪೊಲೀಸರು ಬರುವವರೆಗೂ ಆತನನ್ನು ಹಿಡಿದಿಟ್ಟುಕೊಂಡಿದ್ದಾರೆ. ಬಂಧಿತ ಆರೋಪಿ ಪೀಟರ್ ಲಾರ್ಸನ್‌ನನ್ನು ಸಾಲ್ಟ್ ಲೇಕ್ ಕೌಂಟಿ ಜೈಲಿಗೆ ಕಳುಹಿಸಲಾಗಿದ್ದು, ಪೊಲೀಸರ ವಿಚಾರಣೆಯಲ್ಲಿ ಆತ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಕೊಲ್ಲಲು ಯೋಜಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತ ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದು, ಜೈಲಿನಿಂದ ಬಿಡುಗಡೆಯಾದರೆ ಮತ್ತಷ್ಟು ಸಾಮೂಹಿಕ ಹಿಂಸಾಚಾರ ನಡೆಸುವ ಸಿದ್ಧತೆಯಲ್ಲಿದ್ದ ಎಂದು ನ್ಯಾಯಾಲಯದ ದಾಖಲೆಗಳು ಬಹಿರಂಗಪಡಿಸಿವೆ.
ಸಾವು-ಬದುಕಿನ ಹೋರಾಟದಲ್ಲಿ ಕುಟುಂಬದ ಏಕೈಕ ಆಧಾರ ಸ್ತಂಭ
ಸದ್ಯ 15 ಬಾರಿ ಚಾಕು ಇರಿತಕ್ಕೊಳಗಾಗಿರುವ ಸೊಹೈಲ್ ಅವರಿಗೆ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದ್ದು, ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಸೊಹೈಲ್ ಅವರ ಕುಟುಂಬಕ್ಕೆ ಅವರೊಬ್ಬರೇ ದುಡಿಯುವ ಆಧಾರವಾಗಿದ್ದು, ಅವರಿಗೆ ಯಾವುದೇ ಆರೋಗ್ಯ ವಿಮೆಯ ಸೌಲಭ್ಯವಿಲ್ಲದ ಕಾರಣ ಆರ್ಥಿಕ ನೆರವಿಗಾಗಿ ಅವರ ಸ್ನೇಹಿತರು ಆನ್‌ಲೈನ್ ಮೂಲಕ ಧನಸಹಾಯ ಕೋರಿದ್ದಾರೆ. ಇತ್ತ, ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, ಸಂತ್ರಸ್ತ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅಗತ್ಯವಿರುವ ಎಲ್ಲಾ ರಾಜತಾಂತ್ರಿಕ ಹಾಗೂ ಕಾನೂನು ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದೆ.
ಇದನ್ನೂ ಓದಿ : ‘ಗಗನಯಾನ’ ವಿಜ್ಞಾನಿಗಳ ದಿಢೀರ್ ರಾಜೀನಾಮೆ : ಇಸ್ರೋ ನಿಯಮಗಳು ಮತ್ತಷ್ಟು ಕಠಿಣ.. ನಿರ್ಗಮನಕ್ಕೆ ಬ್ರೇಕ್!


















