ಬೆಂಗಳೂರು : ನಗರದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ಬಳಿಕ ಇದೀಗ ಖಾಸಗಿ ಬಸ್‌ಗಳ ವಿರುದ್ಧವೂ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಟ್ರಾಫಿಕ್ ಸಿಗ್ನಲ್‌ಗಳು, ಪ್ರಮುಖ ಜಂಕ್ಷನ್‌ಗಳು ಹಾಗೂ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಳಿಸುವ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ಟ್ರಾಫಿಕ್ ಪೊಲೀಸ್ ಮತ್ತು ಸಾರಿಗೆ ಇಲಾಖೆ ಸಜ್ಜಾಗಿದೆ.
ಇನ್ನು ಮುಂದೆ ಬಸ್ ನಿಲ್ದಾಣ ಬಿಟ್ಟು ರಸ್ತೆ ಮಧ್ಯೆ ಅಥವಾ ಸಿಗ್ನಲ್ ಬಳಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಳಿಸಿದರೆ ದಂಡದ ಜೊತೆಗೆ ಕಾನೂನು ಕ್ರಮವೂ ಕೈಗೊಳ್ಳಲಾಗುತ್ತದೆ. ವಾಹನ ಸಂಚಾರಕ್ಕೆ ಅಡ್ಡಿಯಾಗುವ ಅನಧಿಕೃತ ನಿಲುಗಡೆಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವಿಶೇಷ ನಿಗಾ ವಹಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಯಮ ಉಲ್ಲಂಘಿಸುವ ಬಸ್‌ಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮತ್ತು ರಸ್ತೆ ಶಿಸ್ತು ಕಾಪಾಡುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.
ಬೆಂಗಳೂರು ನಗರದಲ್ಲಿ ಜುಲೈ 1ರಿಂದ ಫುಟ್‌ಪಾತ್ ತೆರವು ಅಭಿಯಾನ ತೀವ್ರಗೊಂಡಿದ್ದು, ನೂರಾರು ಕಿಲೋಮೀಟರ್ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ. ಇದೀಗ ಅದೇ ಅಭಿಯಾನದ ಮುಂದುವರಿದ ಭಾಗವಾಗಿ ಸಾರ್ವಜನಿಕ ರಸ್ತೆಗಳಲ್ಲಿ ಖಾಸಗಿ ಬಸ್‌ಗಳ ಅನಧಿಕೃತ ನಿಲುಗಡೆಗಳ ಮೇಲೂ ಅಧಿಕಾರಿಗಳು ನಿಗಾ ಹೆಚ್ಚಿಸಿದ್ದಾರೆ.
ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡಿರುವ ಸರ್ಕಾರ, ಟ್ರಾಫಿಕ್ ನಿಯಮ ಉಲ್ಲಂಘಿಸುವ ಖಾಸಗಿ ಬಸ್‌ಗಳಿಗೆ ಎಚ್ಚರಿಕೆ ನೀಡಿದೆ. ನಿಯಮ ಪಾಲಿಸದಿದ್ದರೆ ದಂಡ ಹಾಗೂ ಕಾನೂನು ಕ್ರಮ ತಪ್ಪದು. ನಗರದಲ್ಲಿ ಸಂಚಾರ ಸುಗಮಗೊಳಿಸಲು ಇಂತಹ ಕಟ್ಟುನಿಟ್ಟಿನ ಜಾರಿ ಕ್ರಮ ಮುಂದುವರಿಯಲಿದೆ.
ಇದನ್ನೂ ಓದಿ : ಅಮೆರಿಕ, ಯುರೋಪ್, ಭಾರತದಲ್ಲಿ ಒನ್‌ಪ್ಲಸ್ ವ್ಯವಹಾರ ಸ್ಥಗಿತ? ; ಕಂಪನಿ ನೀಡಿದ ಸ್ಪಷ್ಟನೆ ಏನು?


















