ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತೊಮ್ಮೆ ತೀವ್ರಗೊಂಡ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸೇರಿದ ಎರಡು ತೈಲ ನೌಕೆಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ಒಂದು ನೌಕೆಯಲ್ಲಿದ್ದ ಭಾರತೀಯ ನಾವಿಕರೊಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ನವದೆಹಲಿಯಲ್ಲಿರುವ ಇರಾನ್‌ನ ಉಪ ರಾಯಭಾರಿ ಮೊಹಮ್ಮದ್ ಜವಾದ್ ಹುಸೇನಿ ಅವರಿಗೆ ಸಮನ್ಸ್ ಜಾರಿಗೊಳಿಸಿ ತೀವ್ರ ಪ್ರತಿಭಟನೆ ದಾಖಲಿಸಿದೆ.
ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯ ದಕ್ಷಿಣ ಭಾಗದಲ್ಲಿ ಸಂಚರಿಸುತ್ತಿದ್ದ ‘ಮೊಂಬಾಸಾ’ ಮತ್ತು ‘ಅಲ್ ಬಹಿಯಾ’ ಎಂಬ ಎರಡು ನೌಕೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ಭೀಕರ ದಾಳಿಯಲ್ಲಿ ಮೊಂಬಾಸಾ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದಂತೆ ಆರು ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳು ಸೇರಿದಂತೆ ಒಟ್ಟು ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯ ಬೆನ್ನಲ್ಲೇ ಹಡಗುಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸದ್ಯ ಅದನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.
ಪ್ರತಿಕಾರಕ್ಕೆ ಮುಂದಾದ ಯುಎಇ, ತೀವ್ರಗೊಂಡ ಯುದ್ಧ ಭೀತಿ
ಇರಾನ್‌ನ ಈ ಕೃತ್ಯವನ್ನು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕರೆದಿರುವ ಯುಎಇ, ಪ್ರಾದೇಶಿಕ ಭದ್ರತೆಗೆ ಇದು ದೊಡ್ಡ ಸವಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ತನ್ನ ಭೂಪ್ರದೇಶ ಮತ್ತು ನಾಗರಿಕರ ರಕ್ಷಣೆಗಾಗಿ ಇರಾನ್‌ನ ಈ ಪ್ರಚೋದನಕಾರಿ ನಡೆಗೆ ತಕ್ಕ ಪ್ರತ್ಯುತ್ತರ ನೀಡುವ ಹಕ್ಕು ತನಗಿದೆ ಎಂದು ಯುಎಇ ಹೇಳಿದೆ. ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ವಿರುದ್ಧ ದಿಗ್ಬಂಧನ ಘೋಷಿಸಿದ ಬೆನ್ನಲ್ಲೇ, ಅಮೆರಿಕ ಪಡೆಗಳು ಇರಾನ್ ಮೇಲೆ ದಾಳಿ ನಡೆಸಿವೆ. ಇದಕ್ಕೆ ಪ್ರತಿಕಾರವಾಗಿ ಇರಾನ್ ಸಹ ಬಹ್ರೇನ್, ಜೋರ್ಡಾನ್ ಮತ್ತು ಯುಎಇ ನೌಕೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದರಿಂದ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ.
ಸಂಕಷ್ಟದಲ್ಲಿ ಭಾರತೀಯ ನಾವಿಕರು
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಆರಂಭವಾದ ದಿನದಿಂದ ಇದುವರೆಗೆ ಒಟ್ಟು 11 ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಪಲಾವ್ ಧ್ವಜ ಹೊತ್ತಿದ್ದ ‘ಎಂಟಿ ಸೆಟ್ಟೆಬೆಲ್ಲೊ’ ಟ್ಯಾಂಕರ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು. ಸದ್ಯ ಉದ್ವಿಗ್ನ ವಲಯದಲ್ಲಿ ಸಿಲುಕಿರುವ ಹಡಗುಗಳಿಂದ ಹಲವಾರು ಭಾರತೀಯ ಸಿಬ್ಬಂದಿಯನ್ನು ರಕ್ಷಿಸಲಾಗುತ್ತಿದ್ದು, ಇರಾನ್ ರಾಯಭಾರಿಯೊಂದಿಗೆ ಭಾರತೀಯ ವಿದೇಶಾಂಗ ಸಚಿವಾಲಯ ನಡೆಸಿದ ಸಭೆಯ ಸಂಪೂರ್ಣ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.
ಇದನ್ನೂ ಓದಿ : ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಸೂರ್ಯವಂಶಿ ಮಿಂಚಿಂಗ್ : ‘ಕ್ಲಾಸಿಕ್’ ಸ್ಟೈಲ್ ಹಿಂದಿನ ಸೀಕ್ರೆಟ್ ಏನು?



















