ಟೆಹ್ರಾನ್ : ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಿಚ್ಚು ತೀವ್ರಗೊಂಡಿದೆ. ‘ಹೊರ್ಮುಜ್ ಜಲಸಂಧಿ‘ಯನ್ನು ಮುಚ್ಚಿರುವುದಾಗಿ ಇಂದು ಇರಾನ್ ಘೋಷಿಸಿದ್ದು, ಇದರ ಬೆನ್ನಲ್ಲೇ, ಅಮೆರಿಕ ಸೇನೆಯು ಇರಾನ್‌ನ ಸುಮಾರು 140 ಸೇನಾ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಕಾರವಾಗಿ ಇರಾನ್ ಸಹ ತನ್ನ ನೆರೆಯ ದೇಶಗಳಾದ ಯುಎಇ, ಕತಾರ್, ಕುವೈತ್ ಮತ್ತು ಬಹ್ರೇನ್‌ಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದ್ದು, ಇಡೀ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ತೀವ್ರಗೊಂಡಿದೆ.
ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್
ಅನುಮತಿ ಇಲ್ಲದ ಮಾರ್ಗದಲ್ಲಿ ಸಾಗುತ್ತಿದ್ದ ಹಡಗೊಂದರ ಮೇಲೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಪಡೆಗಳು ಮೊದಲು ಗುಂಡಿನ ದಾಳಿ ನಡೆಸಿದ್ದವು. ತಮ್ಮ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಅಮೆರಿಕ ಮಧ್ಯಪ್ರವೇಶಿಸುತ್ತಿದೆ ಎಂದು ಆರೋಪಿಸಿರುವ ಇರಾನ್, ಮುಂದಿನ ಆದೇಶದವರೆಗೆ ಹಾಗೂ ಈ ವಲಯದಲ್ಲಿ ಅಮೆರಿಕದ ಹಸ್ತಕ್ಷೇಪ ಕೊನೆಗೊಳ್ಳುವವರೆಗೆ ಹೊರ್ಮುಜ್ ಜಲಸಂಧಿಯ ಮೂಲಕ ಯಾವುದೇ ಹಡಗುಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿ, ಖಡಕ್ ಎಚ್ಚರಿಕೆ ನೀಡಿದೆ.
ಅಮೆರಿಕದಿಂದ ಭೀಕರ ದಾಳಿ
ಇರಾನ್‌ನ ಈ ಉದ್ಧಟತನಕ್ಕೆ ಅಮೆರಿಕ ತಕ್ಷಣವೇ ತಿರುಗೇಟು ನೀಡಿದೆ. ಸೈಪ್ರಸ್ ಧ್ವಜ ಹೊತ್ತ ಸರಕು ಹಡಗಿನ ಮೇಲೆ ಇರಾನ್ ದಾಳಿ ಮಾಡಿದ್ದನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಈ ವಾರದಲ್ಲಿ ಮೂರನೇ ಬಾರಿಗೆ ಇರಾನ್ ಮೇಲೆ ಮುಗಿಬಿದ್ದಿದೆ. ಸುಮಾರು 4 ಗಂಟೆಗಳ ಕಾಲ ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ನೆಲೆಗಳು, ನೌಕಾಪಡೆ ಕೇಂದ್ರಗಳು, ಮದ್ದುಗುಂಡು ಸಂಗ್ರಹಾಗಾರಗಳು ಹಾಗೂ ಕರಾವಳಿ ಕಣ್ಗಾವಲು ಕೇಂದ್ರಗಳು ಸೇರಿದಂತೆ 140ಕ್ಕೂ ಹೆಚ್ಚು ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್, “ಇರಾನ್ ತಪ್ಪು ನಿರ್ಧಾರ ಕೈಗೊಂಡಿದೆ, ಈಗ ಅದಕ್ಕೆ ತಕ್ಕ ಬೆಲೆ ತೆರುತ್ತಿದೆ” ಎಂದು ಎಚ್ಚರಿಸಿದ್ದಾರೆ.
ನೆರೆ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ಮಳೆ
ಅಮೆರಿಕದ ದಾಳಿಯಿಂದ ಕೆರಳಿದ ಇರಾನ್, ಅಮೆರಿಕದ ಮಿಲಿಟರಿ ನೆಲೆಗಳನ್ನು ಹೊಂದಿರುವ ಗಲ್ಫ್‌ನ ನೆರೆ ರಾಷ್ಟ್ರಗಳತ್ತ ತನ್ನ ಕ್ಷಿಪಣಿಗಳನ್ನು ತಿರುಗಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕತಾರ್, ಬಹ್ರೇನ್ ಮತ್ತು ಕುವೈತ್ ದೇಶಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಯುಎಇ ರಕ್ಷಣಾ ಸಚಿವಾಲಯವು ವೈಮಾನಿಕ ರಕ್ಷಣಾ ವ್ಯವಸ್ಥೆಯ ಮೂಲಕ ಇರಾನ್‌ನ ಕ್ಷಿಪಣಿಗಳನ್ನು ಹೊಡೆದುರುಳಿಸುತ್ತಿರುವುದಾಗಿ ಖಚಿತಪಡಿಸಿದೆ. ಇತ್ತ ಬಹ್ರೇನ್ ಮತ್ತು ಕತಾರ್‌ಗಳಲ್ಲಿ ವಾಯುದಾಳಿಯ ಸೈರನ್‌ಗಳು ಮೊಳಗಿದ್ದು, ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಲ್ಲಿನ ಸರ್ಕಾರಗಳು ಸೂಚಿಸಿವೆ.
ಮುರಿದುಬಿದ್ದ ಶಾಂತಿ ಒಪ್ಪಂದ
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟ ನಂತರ ಈ ಯುದ್ಧ ಆರಂಭವಾಗಿತ್ತು. ತದನಂತರ ಜೂನ್ 17 ರಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಶಾಂತಿ ಸ್ಥಾಪನೆಗಾಗಿ 14 ಅಂಶಗಳ ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ, ಹೊರ್ಮುಜ್ ಜಲಸಂಧಿಯ ಮೇಲಿನ ಹತೋಟಿ ಮತ್ತು ಹಡಗುಗಳ ಸಂಚಾರಕ್ಕೆ ಶುಲ್ಕ ವಿಧಿಸುವ ಇರಾನ್‌ನ ಹಠದಿಂದಾಗಿ ಈ ಒಪ್ಪಂದ ಮುರಿದುಬಿದ್ದಿದೆ. ಜುಲೈ 8 ರಂದೇ ಈ ಒಪ್ಪಂದ ಮುಕ್ತಾಯಗೊಂಡಿದೆ ಎಂದು ಟ್ರಂಪ್ ಘೋಷಿಸಿದ್ದರು. ಇದೀಗ ನಡೆದಿರುವ ದಾಳಿಗಳು ಇಡೀ ವಲಯವನ್ನು ಮತ್ತಷ್ಟು ಅಸ್ಥಿರತೆಗೆ ತಳ್ಳಿವೆ. ಜಾಗತಿಕ ಮಟ್ಟದಲ್ಲೂ ಆತಂಕ ಮನೆಮಾಡಿದೆ.
ಇದನ್ನೂ ಓದಿ :


















