ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ “ಮುಗಿದ ಅಧ್ಯಾಯ” ಎಂದು ಘೋಷಿಸಿದ ಬೆನ್ನಲ್ಲೇ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷ ತಾರಕಕ್ಕೇರಿದೆ. ಅಮೆರಿಕ ತನ್ನ ಯಾವುದೇ ಬದ್ಧತೆಗಳನ್ನು ಉಲ್ಲಂಘಿಸಿದರೆ ತಕ್ಕ “ಪ್ರತೀಕಾರ” ಎದುರಿಸಬೇಕಾಗುತ್ತದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ತೀಕ್ಷ್ಣವಾಗಿ ಎಚ್ಚರಿಸಿದೆ. ಇದರೊಂದಿಗೆ, ಮಾತುಕತೆಯನ್ನು ಮುಂದುವರಿಸುವಂತೆ ಟೆಹ್ರಾನ್ ವಿನಂತಿಸಿತ್ತು ಎಂಬ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ಸಂಪೂರ್ಣವಾಗಿ ನಿರಾಕರಿಸಿದೆ.
ಶರಣಾಗತಿಯ ಪ್ರಶ್ನೆಯೇ ಇಲ್ಲ ಎಂದ ಇರಾನ್ ಮುಖ್ಯಸ್ಥ
ದಶಕಗಳ ಹಳೆಯ ಶತ್ರುಗಳ ನಡುವೆ ಮತ್ತೆ ಪರಸ್ಪರ ವಾಗ್ದಾಳಿ ಹಾಗೂ ದಾಳಿಗಳು ಆರಂಭವಾಗಿರುವ ಬೆನ್ನಲ್ಲೇ, ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಘೇರ್ ಘಾಲಿಬಾಫ್ ಅಮೆರಿಕ ವಿರುದ್ಧ ಗುಡುಗಿದ್ದಾರೆ. “ಯುದ್ಧವನ್ನು ಕೊನೆಗೊಳಿಸುವುದು ವಿಶ್ವದ ಇತರೆ ದೇಶಗಳ ಆದ್ಯತೆಯಾಗಿರಬಹುದು. ಆದರೆ ಈ ಸಂಘರ್ಷವು ಇರಾನ್‌ನ ಶರಣಾಗತಿಯೊಂದಿಗೆ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂಬುದನ್ನು ಎಲ್ಲರೂ ನೆನಪಿಡಬೇಕು. ಅಮೆರಿಕನ್ನರು ಒಪ್ಪಂದಕ್ಕೆ ದ್ರೋಹ ಬಗೆದಾಗಲೆಲ್ಲಾ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮತ್ತು ಇರಾನ್ ಜನರ ಹಕ್ಕುಗಳನ್ನು ರಕ್ಷಿಸಲು ನಾವು ಸಿದ್ಧರಾಗಿದ್ದೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಮೇಲೆ ನಮಗೆ ಯಾವುದೇ ನಂಬಿಕೆಯಿಲ್ಲ ಎಂಬುದನ್ನು ತಾನು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಮಾತುಕತೆಯ ವೇಳೆ ಸ್ಪಷ್ಟವಾಗಿ ತಿಳಿಸಿದ್ದಾಗಿಯೂ ಅವರು ಹೇಳಿದ್ದಾರೆ.
ಅಮೆರಿಕದೊಂದಿಗೆ ಮಾತುಕತೆ ನಡೆಸುವವರು ದೇಶದ್ರೋಹಿಗಳು!
ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕ ರುಹೊಲ್ಲಾ ಖೊಮೇನಿಯ ಮೊಮ್ಮಗ ಅಲಿ ಖೊಮೇನಿ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದು, ಅಮೆರಿಕದೊಂದಿಗಿನ ಚರ್ಚೆಗಳು ಶಾಂತಿ ಮಾತುಕತೆಗಳಲ್ಲ ಎಂದು ಕರೆದಿದ್ದಾರೆ. “ಅಪರಾಧಿ ಅಮೆರಿಕದೊಂದಿಗೆ ನಾವು ಶಾಂತಿ ಸ್ಥಾಪಿಸಲು ಸಾಧ್ಯವೇ? ನಮ್ಮ ಅಸ್ತಿತ್ವವೇ ಅಹಂಕಾರದ ವಿರುದ್ಧದ ರಾಜಿ ರಹಿತ ಹೋರಾಟವಾಗಿದೆ. ಇಲ್ಲಿ ಸಂಧಾನ ಎಂದರೆ ಅದು ಯುದ್ಧದ ಮತ್ತೊಂದು ರೂಪವಷ್ಟೇ. ಅಮೆರಿಕದೊಂದಿಗೆ ಶಾಂತಿ ಸಾಧಿಸಲು ಯಾರೆಲ್ಲಾ ಮಾತುಕತೆ ನಡೆಸಲು ಬಯಸುತ್ತಾರೋ ಅವರೆಲ್ಲಾ ದೇಶದ್ರೋಹಿಗಳು” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ತಾರಕಕ್ಕೇರಿದ ಉಭಯ ದೇಶಗಳ ಉದ್ವಿಗ್ನತೆ
ಕಳೆದ ತಿಂಗಳಷ್ಟೇ ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದರೂ, ಮಧ್ಯಪ್ರಾಚ್ಯದಲ್ಲಿ ಉಭಯ ದೇಶಗಳ ನಡುವೆ ಮತ್ತೆ ಗುಂಡಿನ ಚಕಮಕಿ ಆರಂಭವಾಗಿದೆ. ಇರಾನ್‌ನ ಮಾಜಿ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಒಂದು ವಾರದ ಅಂತ್ಯಕ್ರಿಯೆಯ ಸಂದರ್ಭದಲ್ಲಿ ದಾಳಿಗಳು ಕೊಂಚ ತಣ್ಣಗಾಗಿದ್ದವು. ಆದರೆ ಅಂತ್ಯಕ್ರಿಯೆ ಮುಗಿದ ಮರುದಿನವೇ ಇರಾನ್‌ನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಸಿದ್ದು, ಈ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ. ಪ್ರಸ್ತುತ ಉದ್ವಿಗ್ನತೆಯ ನಡುವೆಯೇ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಂಧಾನಕಾರರಾಗಿ ಕತಾರ್‌ನ ನಿಯೋಗವೊಂದು ಇರಾನ್‌ಗೆ ಭೇಟಿ ನೀಡಿದ್ದು, ರಾಜತಾಂತ್ರಿಕ ಮಟ್ಟದಲ್ಲಿ ಚರ್ಚೆಗಳು ಮುಂದುವರಿದಿವೆ.



















