ವಿಜಯನಗರ : ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹಲವು ಕಡೆ ವಿದ್ಯುತ್ ಕಂಬಗಳು ಅಪಾಯದ ಸ್ಥಿತಿಯಲ್ಲಿದ್ದು, ಸ್ಥಳೀಯರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

ಸೊಲ್ಲಮನಗುಡಿ ಬಳಿ ಒಂದು ವಿದ್ಯುತ್ ಕಂಬ ಸಂಪೂರ್ಣವಾಗಿ ಬೆಂಡಾಗಿದ್ದು, ಕಿರಾಣಿ ಅಂಗಡಿ ಹಾಗೂ ಮನೆಗಳ ಮೇಲೆಯೇ ವಿದ್ಯುತ್ ತಂತಿಗಳು ಹಾದು ಹೋಗುತ್ತಿವೆ. ಈಗಾಗಲೇ ಒಮ್ಮೆ ವಿದ್ಯುತ್ ತಂತಿ ಅಂಗಡಿಯ ಮೇಲೆ ಬಿದ್ದಿದ್ದು, ಆ ವೇಳೆ ಅಂಗಡಿಯಲ್ಲಿ ಯಾರೂ ಇಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪಟ್ಟಣದ ತುಗದೇಲಿ ಓಣಿಯಲ್ಲೂ ಮತ್ತೊಂದು ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದೆ. ಸಂಜೆ ವೇಳೆಗೆ ಜೋರಾಗಿ ಗಾಳಿ ಬೀಸುತ್ತಿದ್ದಂತೆ ಕಂಬ ಮನೆಗಳ ಮೇಲೆ ಬೀಳುವ ಭೀತಿ ಎದುರಾಗಿದೆ. ಈ ಬಗ್ಗೆ ಹಲವು ಬಾರಿ ಕೆಇಬಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಲೈನ್‌ಮ್ಯಾನ್‌ಗಳಿಗೆ ಮಾಹಿತಿ ನೀಡಿದರೆ ಜೆಇಗೆ ಹೇಳಿ ಎನ್ನುತ್ತಾರೆ. ಜೆಇಗೆ ತಿಳಿಸಿದರೆ ಕಚೇರಿಗೆ ಬಂದು ಅರ್ಜಿ ಕೊಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗೆ ಅಧಿಕಾರಿಗಳು ದಿನಕ್ಕೊಂದು ಉತ್ತರ ನೀಡಿ ಸಮಸ್ಯೆ ಪರಿಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೂಡಲೇ ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೂಡ್ಲಿಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸ್ಯಾಂಕಿ ಕೆರೆಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ ; ಬಾಯ್‌ಫ್ರೆಂಡ್‌ಗೆ ಮೆಸೇಜ್ ಮಾಡಿ ಆತ್ಮಹತ್ಯೆ!



















