ದಕ್ಷಿಣ ಕನ್ನಡ : ‘ತೂಗು ಸೇತುವೆಗಳ ಸರದಾರ’, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನದಿ, ಹಳ್ಳ-ಕೊಳ್ಳಗಳಿಂದಾಗಿ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡಿದ್ದ ನೂರಾರು ಹಳ್ಳಿಗಳಿಗೆ ತೂಗು ಸೇತುವೆಗಳ ಮೂಲಕ ಗಿರೀಶ್ ಭಾರದ್ವಾಜ್ ಕೊಂಡಿಯಾಗಿದ್ದರು. ಅವರ ಅಗಲಿಕೆ ಗ್ರಾಮೀಣ ಭಾರತಕ್ಕೆ ತುಂಬಲಾರದ ನಷ್ಟವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಇಂಜಿನಿಯರಿಂಗ್ ಪದವೀಧರರಾಗಿದ್ದ ಅವರು, ಬಹುದೊಡ್ಡ ಕಂಪನಿಗಳ ಆಕರ್ಷಕ ಉದ್ಯೋಗದ ಆಫರ್‌ಗಳನ್ನು ಬದಿಗೊತ್ತಿ ಗ್ರಾಮೀಣ ಜನರ ಸಬಲೀಕರಣಕ್ಕೆ ಶ್ರಮಿಸಿದ್ದರು. ಸರ್ಕಾರಿ ವ್ಯವಸ್ಥೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕೈಚೆಲ್ಲುವ ಜಾಗದಲ್ಲಿ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ನಿರ್ಮಿಸಬಹುದಾದ ಪರಿಸರಸ್ನೇಹಿ ತೂಗು ಸೇತುವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿನ್ಯಾಸಗೊಳಿಸಿ ದೇಶಾದ್ಯಂತ ಕ್ರಾಂತಿ ಸೃಷ್ಟಿಸಿದ್ದರು.
ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 300ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ಡಾ. ಗಿರೀಶ್ ಭಾರದ್ವಾಜ್ ನಿರ್ಮಿಸಿದ್ದರು. ಆದ್ದರಿಂದ ಇವರು ‘ಬ್ರಿಡ್ಜ್ ಮ್ಯಾನ್’ (ತೂಗುಸೇತುವೆಗಳ ಸರದಾರ) ಎಂದು ಖ್ಯಾತಿಯಾಗಿದ್ದಾರೆ.
ಸಂತಾಪ ಸೂಚಿಸಿದ ಸಿಎಂ ಡಿಕೆ ಶಿವಕುಮಾರ್
‘ತೂಗುಸೇತುವೆಗಳ ಸರದಾರ’, ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ತೀವ್ರ ಬೇಸರ ತಂದಿದೆ. ಅವರ ಅಗಲಿಕೆಯಿಂದ ರಾಜ್ಯವು ಅಪರೂಪದ ತಾಂತ್ರಿಕ ಸಾಧಕನೊಬ್ಬನನ್ನು ಕಳೆದುಕೊಂಡಂತಾಗಿದೆ. ದೇಶದಾದ್ಯಂತ 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿದ್ದ ಗಿರೀಶ್ ಭಾರದ್ವಾಜ್ ಅವರು, ಕಡಿದಾದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಜನರ ಬದುಕನ್ನು ಸುಗಮಗೊಳಿಸಿದ್ದರು. ಇವರ ಈ ನಿಸ್ವಾರ್ಥ ತಂತ್ರಜ್ಞಾನ ಸೇವೆಗೆ ಮನಸೋತ ಗ್ರಾಮಸ್ಥರು ಇವರನ್ನು ಪ್ರೀತಿಯಿಂದ ‘ಸುಳ್ಯದ ವಿಶ್ವೇಶ್ವರಯ್ಯ’ ಎಂದೇ ಕರೆಯುತ್ತಿದ್ದರು. ಡಾ. ಗಿರೀಶ್ ಭಾರದ್ವಾಜ್ ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ : ಇಂದು, ನಾಳೆ ಬೆಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ.. ಆರೆಂಜ್ ಅಲರ್ಟ್ ಘೋಷಣೆ!



















