ದಾವಣಗೆರೆ : ಗ್ರಾಮ ಪಂಚಾಯತಿ ಬಿಲ್ ಕಲಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿಳಿಚೋಡು ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಆಗಿದ್ದ ಶಿವಪ್ಪ (49) ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶಿವಪ್ಪ ಕಳೆದ 23 ವರ್ಷಗಳಿಂದ ಬಿಳಿಚೋಡು ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಡೆತ್ ನೋಟ್‌ನಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ನಂದಿಲಿಂಗೇಶ್ ಅವರಿಂದ ಕಳೆದ ಎರಡು ವರ್ಷಗಳಿಂದ ನಿರಂತರ ಮಾನಸಿಕ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಹೆಚ್ಚುವರಿ ಕಂದಾಯ ವಸೂಲಿ ಮಾಡುವಂತೆ ಒತ್ತಡ, ಟಾರ್ಗೆಟ್ ತಲುಪುವಂತೆ ಒತ್ತಾಯ, ಕೆಲಸ ಸರಿಯಾಗಿ ಮಾಡಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ರಾಜೀನಾಮೆ ನೀಡುವಂತೆ ಹಿಂಸೆ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ನಿತ್ಯದ ಮಾನಸಿಕ ಒತ್ತಡ ಮತ್ತು ಕಿರುಕುಳದಿಂದ ಬೇಸತ್ತು ಶಿವಪ್ಪ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಳಿಚೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆತ್ ನೋಟ್ ಸೇರಿದಂತೆ ಎಲ್ಲಾ ಅಂಶಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ‘ತೂಗು ಸೇತುವೆಗಳ ಸರದಾರ’ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ವಿಧಿವಶ



















