ಬೆಂಗಳೂರು : ಕೇಂದ್ರ ಸರ್ಕಾರದ ಇಂಧನ ಸಚಿವಾಲಯಕ್ಕೆ ಸೇರಿದ ಕೊಡಿಗೇಹಳ್ಳಿ ಗ್ರಾಮದ ಸರ್ವೆ ನಂ.17/1ರ 32 ಗುಂಟೆ ಭೂಮಿಯನ್ನು Chairman Club ವತಿಯಿಂದ ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ, ಕ್ಲಬ್ ಅಧ್ಯಕ್ಷ ಕೆ.ಎಂ. ಚೇತನ್, ಮಾಜಿ ಅಧ್ಯಕ್ಷ ಎನ್. ಮಂಜುನಾಥ್ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿರುವ ಕೇಂದ್ರ ಸರ್ಕಾರದ ಸುಮಾರು 100 ಕೋಟಿ ಮೌಲ್ಯದ ಭೂಮಿಯನ್ನು Chairman Club ತನ್ನ ಆವರಣಕ್ಕೆ ಸೇರಿಸಿಕೊಂಡು ಕಾಂಪೌಂಡ್ ನಿರ್ಮಿಸಿ, ಓಪನ್ ಡೈನಿಂಗ್ ಹಾಗೂ ಪಾರ್ಕಿಂಗ್ ಪ್ರದೇಶವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಕೊಡಿಗೇಹಳ್ಳಿ ಗ್ರಾಮದ ಸರ್ವೆ ನಂ.17/1ರ ಒಟ್ಟು 3.04 ಎಕರೆ ಭೂಮಿ ಕೇಂದ್ರ ಸರ್ಕಾರದ ಇಂಧನ ಸಚಿವಾಲಯದ ಸ್ವತ್ತಾಗಿದ್ದು, ಅದರಲ್ಲಿನ 32 ಗುಂಟೆ ಪ್ರದೇಶವನ್ನು ಅತಿಕ್ರಮಿಸಲಾಗಿದೆ. ಈ ಸಂಬಂಧ ವಿವಿಧ ನ್ಯಾಯಾಲಯಗಳು ಭೂಮಿ ಕೇಂದ್ರ ಸರ್ಕಾರದ್ದೇ ಎಂಬುದನ್ನು ಸ್ಪಷ್ಟಪಡಿಸಿರುವುದಲ್ಲದೆ, 2025ರ ಏಪ್ರಿಲ್ 21ರಂದು ಭೂ ಪರಿವರ್ತನೆ ಅಧಿಸೂಚನೆಯನ್ನು ಎಚ್ಚರಿಕೆ ಪತ್ರ ಎಂದು ನ್ಯಾಯಾಲಯ ರದ್ದುಪಡಿಸಿದೆ ಎಂದು ರಮೇಶ್ ತಿಳಿಸಿದ್ದಾರೆ.

ಇನ್ನು, ಕೇಂದ್ರ ಇಂಧನ ಸಚಿವಾಲಯದ ಅಧಿಕಾರಿಗಳು ಹಲವು ಬಾರಿ ಭೂಮಿಯನ್ನು ಸರ್ವೇ ಮಾಡಿ ವಶಕ್ಕೆ ಪಡೆಯಲು ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ. ಈ ಕುರಿತು ಸಚಿವ ಕೃಷ್ಣ ಬೈರೇಗೌಡರನ್ನು ಭೇಟಿ ಮಾಡಿದಾಗಲೂ ಸರ್ವೇಗೆ ಅವಕಾಶ ದೊರೆಯಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಇಂಧನ ಸಚಿವಾಲಯದ ಅಧಿಕಾರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಭೂ ದಾಖಲೆ ಇಲಾಖೆಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಎನ್.ಆರ್ ರಮೇಶ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ Chairman Club ಅಧ್ಯಕ್ಷ ಕೆ.ಎಂ. ಚೇತನ್, ಮಾಜಿ ಅಧ್ಯಕ್ಷ ಎನ್. ಮಂಜುನಾಥ್, ಸಂಬಂಧಿತ ಪಾಲಿಕೆ ಅಧಿಕಾರಿಗಳ ವಿರುದ್ಧ ಸರ್ಕಾರಿ ಭೂ ಕಬಳಿಕೆ, ನಕಲಿ ದಾಖಲೆ ಸೃಷ್ಟಿ ಹಾಗೂ ವಂಚನೆ ಆರೋಪದಡಿ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ. ಅಲ್ಲದೆ, ಪ್ರಕರಣವನ್ನು CID ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಾಮಮಂದಿರ ಪ್ರಾಣಪ್ರತಿಷ್ಠೆ ಸೇರಿ 124 ಕೋಟಿ ರೂ. ವೆಚ್ಚದ ಮೇಲೆ ಈಗ SIT ಕಣ್ಣು : ತನಿಖೆ ಚುರುಕು!


















