ಬೆಂಗಳೂರು : 40 ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ಹಾಗೂ 25 ವರ್ಷಗಳ ಹಿಂದೆ “ಸೈನಿಕ” ಎಂಬ ಜನಪ್ರಿಯ ಚಿತ್ರದ ಮೂಲಕ ಎಲ್ಲರ ಮನೆಮಾತಾಗಿರುವ ಸಿ.ಪಿ.ಯೋಗೀಶ್ವರ್ ಪುತ್ರ ಧ್ಯಾನ್ ಯೋಗೀಶ್ವರ್ “ಕರ್ಣಾಟಬಲಂ ಅಜೇಯಂ” ಹಾಗೂ “ಸೈನಿಕ 2” ಚಿತ್ರಗಳಲ್ಲಿ ನಾಯಕನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಎರಡು ಚಿತ್ರಗಳಲ್ಲಿ ಯೋಗೀಶ್ವರ್ ಸಹ ಅಭಿನಯಿಸುತ್ತಿದ್ದು, 25 ವರ್ಷಗಳ ನಂತರ ನಟನೆಗೆ ಮರಳಿ ಬಂದಿದ್ದಾರೆ.

ಈ ಪೈಕಿ “ಕರ್ಣಾಟಬಲಂ ಅಜೇಯಂ” ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿದ್ದು, “ಸೈನಿಕ 2” ಚಿತ್ರವನ್ನ ಪುನೀತ್ ರುದ್ರನಾಗ್ ನಿರ್ದೇಶಿಸಲಿದ್ದಾರೆ. ಇತ್ತೀಚೆಗಷ್ಟೇ ಈ ಎರಡು ಚಿತ್ರಗಳ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ “ಕರ್ಣಾಟಬಲಂ ಅಜೇಯಂ” ಚಿತ್ರಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದರು.

ಕೇಂದ್ರ ಸಚಿವ ವಿ.ಸೋಮಣ್ಣ “ಸೈನಿಕ 2” ಚಿತ್ರಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದರು. ಬೆಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಕ್ಯಾಮೆರಾ ಚಾಲನೆ ಮಾಡಿದರು. ಮಾಜಿ ಸಚಿವ ಸುಧಾಕರ್, ಶಾಸಕರಾದ ಉದಯ್, ರವಿ, ಮೋಹನ್ ಸಾ.ರಾ.ಗೋವಿಂದು, ವಿಶ್ವಪ್ರಸಾದ್ (ಪೀಪಲ್ ಮೀಡಿಯಾ ಫ್ಯಾಕ್ಟರಿ), ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಲಹರಿ ವೇಲು, ನಿರ್ದೇಶಕ ಸಂತೋಷ್ ಆನಂದರಾಮ್ ಮುಂತಾದವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಈ ಎರಡು ಚಿತ್ರಗಳನ್ನು ಶೀಲಾ ಯೋಗೀಶ್ವರ್ ಅವರು ನಿರ್ಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಎರಡು ಚಿತ್ರಗಳ ಫಸ್ಟ್ ಲುಕ್ ಟೀಸರ್ ಸಹ ಅನಾವರಣವಾಯಿತು. ನಂತರ ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಮಾತನಾಡಿದರು.

ನಾನು ಸಾಮಾನ್ಯವಾಗಿ ಯಾವುದೇ ಮುಹೂರ್ತ ಸಮಾರಂಭಗಳಿಗೆ ಹೋಗುವುದಿಲ್ಲ. ಶಾಸಕ ಮಿತ್ರ ಯೋಗೀಶ್ವರ್ ಪ್ರೀತಿಯ ಆಹ್ವಾನದ ಮೇರೆಗೆ ಬಂದಿದ್ದೇನೆ. “ಕರ್ಣಾಟಬಲಂ ಅಜೇಯಂ” ಚಿತ್ರದ ಮೂಲಕ ಯೋಗೀಶ್ವರ್ ಅವರ ಪುತ್ರ ಧ್ಯಾನ್, ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಟೀಸರ್ ನೋಡಿದಾಗ ಧ್ಯಾನ್ ನಟನೆಯನ್ನು ಕಲಿತು ಬಂದು ಅಭಿನಯಿಸುತ್ತಿದ್ದಾರೆ ಎಂದು ತಿಳಿಯುತ್ತದೆ. ಯೋಗೀಶ್ವರ್ ಅವರು ಸಹ ಈ ಹಿಂದೆ ನಟರಾಗಿ ಜನಪ್ರಿಯರಾದವರು. ಅವರು ಸಹ ಈಗ ಅಭಿನಯಕ್ಕೆ ಮರಳಿ ಬಂದಿದ್ದಾರೆ. ಧ್ಯಾನ್ ನನ್ನ ಮಗ ಇದ್ದ ಹಾಗೆ. ಅವನ ಚಿತ್ರರಂಗದ ಭವಿಷ್ಯ ಉಜ್ವಲವಾಗಿರಲಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾರೈಸಿದರು. ಸಿ.ಪಿ.ಯೋಗೀಶ್ವರ್ ಅವರು ನನ್ನ ಬಹ ವರ್ಷಗಳ ಸ್ನೇಹಿತರು ಅವರ ಮಗ ಹಾಗೂ ಅವರು ಇಬ್ಬರು ನಟಿಸುತ್ತಿರುವ “ಸೈನಿಕ ೨” ಚಿತ್ರಕ್ಕೆ ಚಾಲನೆ ನೀಡಿದ್ದು, ಬಹಳ ಖುಷಿಯಾಗಿದೆ. ಚಿತ್ರ ಯಶಸ್ವಿಯಾಗಲೆಂದು ಕೇಂದ್ರ ಸಚಿವ ವಿ.ಸೋಮಣ್ಣ ಶುಭ ಕೋರಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 25 ವರ್ಷಗಳ ಹಿಂದೆ ನನ್ನ ಅಭಿನಯದ “ಸೈನಿಕ” ಚಿತ್ರದ ಮುಹೂರ್ತದ ದಿನ ಬಂದು ಕ್ಲಾಪ್ ಮಾಡಿದ್ದರು. ಇವತ್ತು ನನ್ನ ಮಗ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೂ ಅವರೆ ಬಂದು ಕ್ಲಾಪ್ ಮಾಡಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ಕೇಂದ್ರ ಸಚಿವರಾದ ಶ್ರೀವಿ.ಸೋಮಣ್ಣ ಅವರಿಗೆ ಹಾಗೂ ಶ್ರೀಡಿ.ಕೆ.ಸುರೇಶ್ ಸೇರಿದಂತೆ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಗಣ್ಯರಿಗೆ ಧನ್ಯವಾದ. ನಾನು ನಟನಾಗಿಯೇ ನಲವತ್ತು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದವನು. ಆನಂತರ ರಾಜಕೀಯಕ್ಕೆ ಬಂದೆ. ಈಗ ಮರಳಿ ಚಿತ್ರರಂಗಕ್ಕೆ ಬಂದಿದ್ದೇನೆ. ನನ್ನ ಮಗ ಧ್ಯಾನ್ ಯೋಗೀಶ್ವರ್ , ಈ ಎರಡು ಚಿತ್ರಗಳ ಮೂಲಕ ನಾಯಕನಾಗಿ ಚಿತ್ರರಂಗ ಮಾಡುತ್ತಿದ್ದಾನೆ. ಅದರಲ್ಲಿ ಮೊದಲು “ಕರ್ಣಾಟಬಲಂ ಅಜೇಯಂ” ಚಿತ್ರ ಆರಂಭವಾಗಲಿದೆ. ಮುಂದಿನ ಸಂಕ್ರಾಂತಿ ಸಮಯಕ್ಕೆ “ಕರ್ಣಾಟಬಲಂ ಅಜೇಯಂ” ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಹಿರಿಯ ನಿರ್ದೇಶಕ ನಾಗಣ್ಣ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೊಂದು ಕನ್ನಡದ ಮಣ್ಣಿನ ಕಥೆ. ನಾಯಕನಾಗಲು ಬೇಕಾದ ಪೂರ್ವತಯಾರಿಗಳನ್ನೆಲ್ಲಾ ಮಾಡಿಕೊಂಡು ನನ್ನ ಮಗ ಚಿತ್ರರಂಗಕ್ಕೆ ಬರುತ್ತಿದ್ದಾನೆ. ಈ ಎರಡು ಚಿತ್ರಗಳಲ್ಲಿ ನನ್ನ ಮಗ ಹಾಗೂ ನಾನು ಇಬ್ಬರು ನಟಿಸುತ್ತಿದ್ದೇವೆ. ‘ಸೈನಿಕ 2’ ಚಿತ್ರವನ್ನು ಪುನೀತ್ ರುದ್ರನಾಗ್ ನಿರ್ದೇಶಿಸುತ್ತಿದ್ದಾರೆ. ನಮ್ಮ ಎರಡು ಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಸಿ.ಪಿ.ಯೋಗೀಶ್ವರ್.
ನಾನು ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿರುವುದು ಖುಷಿಯಾಗಿದೆ. ಈ ಅವಕಾಶ ಕಲ್ಪಿಸಿಕೊಟ್ಟ ನನ್ನ ತಂದೆ-ತಾಯಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ. ಇನ್ನೂ, ನಾನು ನಟನೆಗೆ ಬೇಕಾದ ಎಲ್ಲಾ ಪೂರ್ವತಯಾರಿ ಮಾಡಿಕೊಂಡಿದ್ದೇನೆ. ನನ್ನ ಎರಡು ಚಿತ್ರಗಳ ನಿರ್ದೇಶಕರಾದ ನಾಗಣ್ಣ ಹಾಗೂ ಪುನೀತ್ ರುದ್ರನಾಗ್ ಅವರಿಂದಲೂ ಸಾಕಷ್ಟು ಕಲಿಯುತ್ತಿದ್ದೇನೆ. ನನ್ನ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ನಾಯಕ ಧ್ಯಾನ್ ಯೋಗೀಶ್ವರ್ ತಿಳಿಸಿದರು.
ನಮ್ಮ ಭಾರತದ ಮಣ್ಣಿನಲ್ಲಿ ಸಾಕಷ್ಟು ಇತಿಹಾಸಗಳು ಸೃಷ್ಟಿಯಾಗಿದೆ. ಇದನ್ನು ನಾವು ನಮ್ಮ ಮಕ್ಕಳಿಗೆ ತಿಳಿಸುವುದು ಕರ್ತವ್ಯ. ಅದನ್ನು ಸಿನಿಮಾ ಮೂಲಕ ತೋರಿಸಿದಾಗ ಜನರಿಗೆ ಬೇಗ ತಲುಪುತ್ತದೆ. “ಕರ್ಣಾಟಬಲಂ ಅಜೇಯಂ” ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಆರನೇ ಶತಮಾನದಲ್ಲಿ ಇಮ್ಮಡಿ ಪುಲಕೇಶಿಯ ಆಡಳಿತದಲ್ಲಿ ಬಾದಾಮಿ ಹೇಗಿತ್ತು. ಈಗ ಹೇಗಿದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಯೋಗಿಶ್ವರ್ ಅವರೆ ಕಥೆಯ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ. ಎಂ.ಎಸ್ ರಮೇಶ್, ವಿಶ್ವ ಹಾಗೂ ಗುರುರಾಜ್ ದೇಸಾಯಿ ಕಥಾವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ. ನುರಿತ ತಂತ್ರಜ್ಞರು ಹಾಗೂ ಅನುಭವಿ ಕಲಾವಿದರು ಈ ಚಿತ್ರದಲ್ಲಿರುತ್ತಾರೆ. ತಮ್ಮ ಮಗನನ್ನು ಚಿತ್ರರಂಗಕ್ಕೆ ನಾಯಕನಾಗಿ ಪರಿಚಯಿಸುವ ಮೊದಲ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ನನಗೆ ನೀಡಿರುವುದಕ್ಕೆ ಸಿ.ಪಿ.ಯೋಗೀಶ್ವರ್ ಗೆ ಧನ್ಯವಾದ ಎಂದರು “ಕರ್ಣಾಟಬಲಂ ಅಜೇಯಂ” ಚಿತ್ರದ ನಿರ್ದೇಶಕ ನಾಗಣ್ಣ.
“ಸೈನಿಕ ಚಿತ್ರ ಬಿಡುಗಡೆಯಾಗಿದ್ದಾಗ ನನಗೆ ಹದಿನಾರು ವರ್ಷ. ಆ ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಈಗ ಆ ಚಿತ್ರದ ಎರಡನೇ ಭಾಗದ ನಿರ್ದೇಶನವನ್ನು ನಾನು ಮಾಡುತ್ತಿರುವುದು ಖುಷಿಯಾಗುತ್ತಿದೆ. ಇದೊಂದು ನೈಜ ಕಥಾಹಂದರ ಹೊಂದಿರುವ ಚಿತ್ರ. ಕಥೆಯ ಜವಾಬ್ದಾರಿಯನ್ನು ಯೋಗೀಶ್ವರ್ ಅವರೆ ವಹಿಸಿಕೊಂಡಿದ್ದಾರೆ. ನಾಯಕ ಧ್ಯಾನ್ ಅವರಿಗೆ ನಾಯಕನಾಗಲು ಬೇಕಾದ ಎಲ್ಲಾ ಗುಣಗಳು ಇದೆ. ಕಥೆ ಇನ್ನೂ ಪೂರ್ಣವಾಗಿಲ್ಲ. ಮುಂದಿನ ವರ್ಷ ಈ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದು “ಸೈನಿಕ-2” ಚಿತ್ರದ ನಿರ್ದೇಶಕ ಪುನೀತ್ ರುದ್ರನಾಗ್ ಹೇಳಿದರು.
ನನಗೆ ಸಿ.ಪಿ.ಯೋಗೀಶ್ವರ್ ಅವರು ಮೂವತ್ತು ವರ್ಷಗಳ ಪರಿಚಯ. “ಸೈನಿಕ” ಚಿತ್ರದ ಸಮಯದಲ್ಲೂ ಅವರ ಜೊತಗಿದೆ. ಈಗ ಅವರ ಮಗ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೂ ಅವರ ಜೊತೆಗಿರುವುದು ಸಂತೋಷವಾಗಿದೆ ಎಂದರು ಕಾರ್ಯಕಾರಿ ನಿರ್ಮಾಪಕ ಕೆ.ಪಿ.ಶ್ರೀಕಾಂತ್. “ಕರ್ಣಾಟಬಲಂ ಅಜೇಯಂ” ಚಿತ್ರದ ಹಾಡುಗಳ ಕುರಿತು ವಿ.ಹರಿಕೃಷ್ಣ ಮಾಹಿತಿ ನೀಡಿದರು. ಖ್ಯಾತ ನಟ ಜಗಪತಿಬಾಬು ಹಾಗೂ ಇಪ್ಪತ್ತು ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವ ತೆಲುಗು ನಟಿ ಲಯ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಮಿಸ್ ಯುನಿವರ್ಸ್ ಇಂಡಿಯಾ ಮಣಿಕ ವಿಶ್ವಕರ್ಮ ಹಾಗೂ ಮಿಸ್ ಯುನಿವರ್ಸ್ ಇಂಡಿಯಾ ರನ್ನರ್ ಅಪ್ ರೇಖಾ ಪಾಂಡೆ “ಕರ್ಣಾಟಬಲಂ ಅಜೇಯಂ” ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಬಹಳ ಖುಷಿಯಾಗಿದೆ ಎಂದು ತಿಳಿಸಿದರು. ಛಾಯಾಗ್ರಾಹಕರಾದ ಶೇಖರ್ ಚಂದ್ರ ಹಾಗೂ ಸಂಕೇತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



















