ಮಂಗಳೂರು : ಮಂಗಳೂರಿನಲ್ಲಿ ಚಿನ್ನದ ವ್ಯಾಪಾರಿಯ ಮೇಲೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿರುವ 13 ಪ್ರಮುಖ ಆರೋಪಿಗಳ ಫೋಟೋ ಹಾಗೂ ಹೆಸರುಗಳನ್ನು ಮಂಗಳೂರು ಪೊಲೀಸರು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದಾರೆ.
ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಗುರುತಿಸಿರುವ ಪಾಂಡಿಚೇರಿ ಮೂಲದ ಶಿಬಿನ್ ಗಂಗಾಧರನ್ ಸೇರಿದಂತೆ, ಕೇರಳದ ಶ್ರೀರಾಗ್, ಅತುಲ್, ಮಿಥುನ್‌ಲಾಲ್, ಅಜೀರ್ ತರಾಯಿಲ್, ವೈಶಾಕ್, ಅಸೀರ್ ಪಯ್ಯನ್ನೂರ್, ಪ್ರಣವ್, ವಿಜಿಲ್, ಕೊಡಗಿನ ಉಬೈದ್, ಫಿರೋಜ್, ಮೊಯ್ದು ಅಬ್ಬಾಸ್, ಜಿಯಾದ್ ಹಾಗೂ ಜಮೀರ್ ಅಲಿಕಾ ಸೇರಿದಂತೆ ಒಟ್ಟು 13 ಆರೋಪಿಗಳ ವಿವರಗಳನ್ನು ಪ್ರಕಟಿಸಲಾಗಿದೆ.
ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಪೊಲೀಸರಿಗೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದ್ದು, ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಹಾಗೂ ಅವರ ಗುರುತನ್ನು ಗೌಪ್ಯವಾಗಿಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಆರೋಪಿಗಳ ಫೋಟೋ ಮತ್ತು ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುತ್ತಿದ್ದು, ಆರೋಪಿಗಳ ಬಂಧನಕ್ಕಾಗಿ ಕೇರಳ ಪೊಲೀಸರೊಂದಿಗೆ ಮಂಗಳೂರು ಪೊಲೀಸರು ಸಮನ್ವಯ ಸಾಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ ;
ಜೂನ್ 29ರ ಮುಂಜಾನೆ ಮಂಗಳೂರಿನ ಬೈಕಂಪಾಡಿ ಬಳಿ ಮಹಾರಾಷ್ಟ್ರ ಮೂಲದ ಚಿನ್ನದ ವ್ಯಾಪಾರಿ ವಿಕಾಸ್ ಅವರ ಕಾರು ತಡೆದು, ಕಾರು ಸಮೇತ ಸುಮಾರು 180 ಗ್ರಾಂ ಚಿನ್ನ ಹಾಗೂ ₹23 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರರಿಗೆ ಸಹಕರಿಸಿದ್ದ ಆರೋಪದಲ್ಲಿ ಕೇರಳದ ನಿಮಿಲ್, ಮಡಿಕೇರಿ ಮೂಲದ ಇರ್ಷಾದ್ ಹಾಗೂ ಮುಸ್ತಾಫ ಅವರನ್ನು ಈ ಹಿಂದೆಯೇ ಪಣಂಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ-ಮಗುವಿನ ರಕ್ಷಣೆ ; ಕೈಮುಗಿದು ಜೀವ ಉಳಿಸಿದ ಇನ್ಸ್‌ಪೆಕ್ಟರ್ ಜಗದೀಶ್!



















