ಬೆಂಗಳೂರು : ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಹುಳಿಮಾವು ಪೊಲೀಸರು ತಮ್ಮ ಸಮಯಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಕೇರಳ ಮೂಲದ ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ಹುಳಿಮಾವು ಪ್ರದೇಶದಲ್ಲಿ ವಾಸವಾಗಿದ್ದು, ಬಿಡಿಎ ಲೇಔಟ್‌ನ ಐದು ಅಂತಸ್ತಿನ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿಯ ಕುಟುಂಬದ ಯುವಕನಿಂದ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದ ಮಹಿಳೆ, ಈ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿಸಬೇಕು ಎಂದು ಪಟ್ಟು ಹಿಡಿದಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹುಳಿಮಾವು ಇನ್ಸ್‌ಪೆಕ್ಟರ್ ಜಗದೀಶ್, “ಕೈಮುಗಿದು ಬೇಡಿಕೊಳ್ಳುತ್ತೇನೆ… ನನಗೊಂದು ಅವಕಾಶ ಕೊಡಿ. ನಾಳೆಯೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸುತ್ತೇನೆ” ಎಂದು ಪರಿಪರಿಯಾಗಿ ಮನವಿ ಮಾಡಿ ಮಹಿಳೆಯ ಮನವೊಲಿಸಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ನಡೆದ ನಿರಂತರ ಮಾತುಕತೆಯ ಬಳಿಕ ಮಹಿಳೆ ಮತ್ತು ಮಗುವನ್ನು ಸುರಕ್ಷಿತವಾಗಿ ಕಟ್ಟಡದಿಂದ ಕೆಳಗೆ ಕರೆತರಲಾಗಿದೆ. ಇನ್ನೊಂದೆಡೆ, ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದ ಕೆಳಭಾಗದಲ್ಲಿ ಬಲೂನ್ ಬೆಡ್ ಸಿದ್ಧಪಡಿಸಲಾಗಿತ್ತು.
ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪ ಕೇಳಿಬಂದ ಯುವಕನನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದು, ರಕ್ಷಿಸಲ್ಪಟ್ಟ ಮಹಿಳೆ ಮತ್ತು ಮಗುವಿಗೆ ಕೌನ್ಸೆಲಿಂಗ್ ನೀಡಲಾಗುತ್ತಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ನಿಲ್ಲದ ರೋಡ್ ರೇಜ್ – ರಾಡ್ ಹಿಡಿದು ಕ್ಯಾಬ್ ಚಾಲಕನಿಗೆ ಹಲ್ಲೆಗೈದ ಮತ್ತೋರ್ವ ಡ್ರೈವರ್!



















