ಪುಣೆ : ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿರುವ ಪುಣೆ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಪುಣೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆದರೆ ಕೇತನ್ ಅವರನ್ನು ಕೋಟೆಯಿಂದ ಕೆಳಕ್ಕೆ ತಳ್ಳಿದ್ದು ಯಾರು ಎಂಬುದನ್ನು ಇಬ್ಬರು ಆರೋಪಿಗಳೂ ಬಾಯಿಬಿಡುತ್ತಿಲ್ಲ.
ಹೀಗಾಗಿ ಜೂನ್ 18ರಂದು ಲೋಹಗಢ್ ಕೋಟೆಯ ಕಂದಕಕ್ಕೆ ಕೇತನ್ ಅವರನ್ನು ತಳ್ಳಿ ಕೊಂದ ಆರೋಪ ಹೊತ್ತಿರುವ ಅವರ ಭಾವಿ ಪತ್ನಿ, ಮುಖ್ಯ ಆರೋಪಿ ಸಿಯಾ ಗೋಯಲ್ ಅವರಿಗೆ ಸುಳ್ಳು ಪತ್ತೆ (ಪಾಲಿಗ್ರಾಫ್) ಪರೀಕ್ಷೆ ನಡೆಸಲು ಅನುಮತಿ ಕೋರಿ ಪೊಲೀಸರು ಗುರುವಾರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೇತನ್ ಅವರನ್ನು ಕಂದಕಕ್ಕೆ ತಳ್ಳಿದ್ದು ಯಾರು ಎಂಬುದನ್ನು ಸಾಬೀತುಪಡಿಸಲು ಸದ್ಯಕ್ಕೆ ಯಾವುದೇ ಪ್ರತ್ಯಕ್ಷದರ್ಶಿಗಳು ಅಥವಾ ನಿರ್ಣಾಯಕ ಪುರಾವೆಗಳು ಲಭ್ಯವಿಲ್ಲದ ಕಾರಣ, ತನಿಖೆಯನ್ನು ಮುನ್ನಡೆಸಲು ಈ ಪರೀಕ್ಷೆ ಅತ್ಯಗತ್ಯ ಎಂದು ಪೊಲೀಸರು ತನಿಖಾ ಸಂಸ್ಥೆಗೆ ತಿಳಿಸಿದ್ದಾರೆ.
ತನಿಖೆಯ ಮುಂದಿನ ಹಂತಕ್ಕೆ ಪಾಲಿಗ್ರಾಫ್ ಅನಿವಾರ್ಯ
ಪ್ರಕರಣದ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಎನ್ನಲಾದ ಚೇತನ್ ಚೌಧರಿ ಅವರ ಹೇಳಿಕೆಗಳನ್ನು ಈಗಾಗಲೇ ದಾಖಲಿಸಿಕೊಳ್ಳಲಾಗಿದೆ. ಆದರೆ, ಲಭ್ಯವಿರುವ ಸಾಕ್ಷ್ಯಾಧಾರಗಳು ಸೀಮಿತವಾಗಿರುವುದರಿಂದ ತನಿಖೆಗೆ ಹೊಸ ಆಯಾಮ ನೀಡಲು ಮತ್ತು ಮಹತ್ವದ ಸುಳಿವುಗಳನ್ನು ಪತ್ತೆಹಚ್ಚಲು ಪಾಲಿಗ್ರಾಫ್ ಪರೀಕ್ಷೆಯ ಅಗತ್ಯವಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಪರೀಕ್ಷೆಗಳ ವರದಿಯನ್ನು ನ್ಯಾಯಾಲಯದಲ್ಲಿ ನೇರ ಸಾಕ್ಷ್ಯವಾಗಿ ಪರಿಗಣಿಸದಿದ್ದರೂ, ತನಿಖಾಧಿಕಾರಿಗಳಿಗೆ ಪ್ರಕರಣದ ನಿಗೂಢತೆಯನ್ನು ಭೇದಿಸಲು ಇದು ಸಹಕಾರಿಯಾಗಲಿದೆ ಎನ್ನಲಾಗಿದೆ.
ಪುಣೆ ಮೂಲದ ರಿಯಾಲ್ಟರ್ ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಅವರ ವಿವಾಹವು ಮುಂಬರುವ ನವೆಂಬರ್‌ನಲ್ಲಿ ನಡೆಯಬೇಕಿತ್ತು. ಆದರೆ ಜೂನ್ 18 ರಂದು ಲೋಹಗಢ್ ಕೋಟೆಯ ಪ್ರಪಾತಕ್ಕೆ ತಳ್ಳಿ ಕೇತನ್ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಸಿಯಾ ತನ್ನ ಪ್ರೇಮಿ ಚೇತನ್ ಚೌಧರಿ ಜೊತೆ ಸೇರಿ ಈ ಹತ್ಯೆಯ ಸಂಚು ರೂಪಿಸಿದ್ದಳು ಎಂಬ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದ್ದು, ಸದ್ಯ ಜುಲೈ 3ರವರೆಗೆ ಇಬ್ಬರನ್ನೂ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಈ ಹೈಪ್ರೊಫೈಲ್ ಕೊಲೆ ಪ್ರಕರಣವು ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.
ಮೊಬೈಲ್ ಡೇಟಾ ಡಿಲೀಟ್ ಶಂಕೆ
ಇದೇ ವೇಳೆ, ಕೊಲೆಯಾದ ಕೇತನ್ ಅಗರ್ವಾಲ್ ಅವರ ಮೊಬೈಲ್ ಫೋನ್‌ನಿಂದ ಯಾವುದೇ ಪ್ರಮುಖ ಸಾಕ್ಷ್ಯಗಳನ್ನು ಅಳಿಸಿಹಾಕಲಾಗಿದೆಯೇ ಅಥವಾ ತಿದ್ದಲಾಗಿದೆಯೇ ಎಂಬ ಬಗ್ಗೆಯೂ ಪುಣೆ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ನಂತರ ಕೇತನ್ ಮೊಬೈಲ್ ಫೋನ್ ಸಿಯಾ ಬಳಿಯೇ ಇತ್ತು ಮತ್ತು ಆಕೆ ಅದನ್ನು ತಡವಾಗಿ ಕೇತನ್ ಕುಟುಂಬಕ್ಕೆ ಹಸ್ತಾಂತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದು, ವಿಧಿವಿಜ್ಞಾನ (ಫೋರೆನ್ಸಿಕ್) ತಜ್ಞರು ಮೊಬೈಲ್ ಪರಿಶೀಲಿಸುತ್ತಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಪೊಲೀಸರು ಜುಲೈ 1 ರಂದು ಚೇತನ್ ಚೌಧರಿಯನ್ನು ಕರೆದೊಯ್ದು ಲೋಹಗಢ್ ಕೋಟೆಯಲ್ಲಿ ಅಪರಾಧದ ಸ್ಥಳವನ್ನು ಮರುಸೃಷ್ಟಿ ಮಾಡಿದ್ದಾರೆ. ಇದಕ್ಕೂ ಮುನ್ನ ಸಿಯಾ ಗೋಯಲ್ ಸಮ್ಮುಖದಲ್ಲೂ ಡಮ್ಮಿ ಗೊಂಬೆಯನ್ನು ಬಳಸಿ ಕೇತನ್ ಕಂದಕಕ್ಕೆ ಬಿದ್ದ ದೃಶ್ಯವನ್ನು ಪೊಲೀಸರು ಮರುಸೃಷ್ಟಿಸಿ ತನಿಖೆ ನಡೆಸಿದ್ದರು.
ಇದನ್ನೂ ಓದಿ : ಟೆಂಡರ್ ಕ್ರಾಂತಿ : ಶೇ.40ರ ಕಮಿಷನ್ ದಂಧೆಗೆ ಸಿಎಂ ವಿಜಯ್ ಬ್ರೇಕ್.. ತಮಿಳುನಾಡಿಗೆ ಕೋಟ್ಯಂತರ ರೂ. ಉಳಿತಾಯ!



















