ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2027 ರ ಆವೃತ್ತಿಗೆ ಮುನ್ನವೇ ಆಟಗಾರರ ವಿನಿಮಯ (ಟ್ರೆಡ್) ಕುರಿತಾದ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಡುವೆ ನಡೆಯಬಹುದು ಎನ್ನಲಾದ ಸಂಭಾವ್ಯ ಆಟಗಾರರ ಟ್ರೇಡ್ ಬಗ್ಗೆ ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿದೆ.
ಲಕ್ನೋ ಸೂಪರ್ ಜೈಂಟ್ಸ್‌ನಿಂದ ರಿಷಭ್ ಪಂತ್ ಅವರನ್ನು ತಂಡಕ್ಕೆ ಕರೆತರುವ ಸಲುವಾಗಿ ತಮ್ಮ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟುಕೊಟ್ಟ ನಂತರ, ಇದೀಗ ಮತ್ತೊಂದು ಟ್ರೇಡ್ ವದಂತಿ ಹಬ್ಬಿದೆ. ಇದರ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಸ್ಪೋಟಕ ಫಿನಿಶರ್ ಅಶುತೋಷ್ ಶರ್ಮಾ ಅವರನ್ನು ಸಿಎಸ್‌ಕೆಗೆ ಬಿಟ್ಟುಕೊಟ್ಟು, ಅವರ ಬದಲಿಗೆ ಸ್ಪಿನ್ನರ್ ರಾಹುಲ್ ಚಹರ್ ಅವರನ್ನು ಪಡೆಯಲಿದ್ದಾರೆ ಎನ್ನಲಾಗಿದೆ. ಈ ವದಂತಿಯ ಕುರಿತು ಇದೀಗ ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಚ್ಚರಿ ವ್ಯಕ್ತಪಡಿಸಿದ್ದು, ಈ ಒಪ್ಪಂದದ ತರ್ಕವನ್ನು ಪ್ರಶ್ನಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತು ಮುಕ್ತವಾಗಿ ಮಾತನಾಡಿರುವ ಅಶ್ವಿನ್, ಆಟಗಾರರನ್ನು ವಿನಿಮಯ ಮಾಡಿಕೊಳ್ಳುವಾಗ ಕೊಂಚ ತರ್ಕ ಹಾಗೂ ನ್ಯಾಯಸಮ್ಮತತೆಯನ್ನು ಅನುಸರಿಸಬೇಕು ಎಂದಿದ್ದಾರೆ. “ಸಿಎಸ್‌ಕೆ ತಂಡಕ್ಕೆ ಅಶುತೋಷ್ ಶರ್ಮಾ ಅವರಂತಹ ಆಟಗಾರನ ಅಗತ್ಯವಿದೆ ಎಂಬುದು ನನಗೆ ಅರ್ಥವಾಗುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬುದು ನಿಜ. ಆದರೆ ಅಶುತೋಷ್ ಅವರಂತಹ ಆಟಗಾರನನ್ನು ಬಿಟ್ಟುಕೊಟ್ಟು, ಬದಲಿಗೆ ನೀವು ಯಾರನ್ನು ಪಡೆಯುತ್ತಿದ್ದೀರಿ? ಕಳೆದ ಆವೃತ್ತಿಯ ಪೂರ್ತಿ ಪಂದ್ಯಗಳಲ್ಲಿ ಬೆಂಚ್ ಕಾಯುತ್ತಿದ್ದ ರಾಹುಲ್ ಚಹರ್ ಅವರನ್ನೇ? ಇದರಲ್ಲಿ ಯಾವುದೇ ತರ್ಕವಿಲ್ಲ” ಎಂದು ಅಶ್ವಿನ್ ಖಡಾಖಂಡಿತವಾಗಿ ಹೇಳಿದ್ದಾರೆ. ಸಿಎಸ್‌ಕೆ ತಂಡಕ್ಕೆ ಅಶುತೋಷ್ ಸೇರ್ಪಡೆಯಿಂದ ಲಾಭವಾಗಬಹುದು, ಆದರೆ ಡಿಸಿಗೆ ರಾಹುಲ್ ಚಹರ್ ಅವರಿಂದ ಯಾವುದೇ ವಿಶೇಷ ಸೇರ್ಪಡೆಯಾಗುವುದಿಲ್ಲ ಎಂಬುದು ಅಶ್ವಿನ್ ಅವರ ವಾದ.
ಪಿನಿಶರ್ ಲಭ್ಯವಾಗುವ ಮಹತ್ವ
ಮುಂದುವರಿದು ಮಾತನಾಡಿದ ಅಶ್ವಿನ್, ಫಿನಿಶರ್ ಪಾತ್ರದ ಮಹತ್ವವನ್ನು ವಿವರಿಸಿದರು. ಕ್ರಿಕೆಟ್‌ನಲ್ಲಿ, ಅದರಲ್ಲಿಯೂ ವಿಶೇಷವಾಗಿ ಭಾರತೀಯ ಆಟಗಾರರಲ್ಲಿ ಓರ್ವ ಅತ್ಯುತ್ತಮ ಫಿನಿಶರ್ ಲಭ್ಯವಾಗುವುದು ಬಹಳ ವಿರಳ ಹಾಗೂ ಅಮೂಲ್ಯ. ಇಂತಹ ಅಪರೂಪದ ಆಟಗಾರನನ್ನು ಡೆಲ್ಲಿ ಕ್ಯಾಪಿಟಲ್ಸ್ ಕೇವಲ ಸ್ಪಿನ್ನರ್‌ಗಾಗಿ ಬಿಟ್ಟುಕೊಡುವಷ್ಟು ಮೂರ್ಖತನ ತೋರಲಾರದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಹೌದು, ಕುಲದೀಪ್ ಯಾದವ್ ಅವರನ್ನು ಬಿಟ್ಟುಕೊಟ್ಟಿರುವ ಕಾರಣ ಡಿಸಿಗೆ ಸ್ಪಿನ್ನರ್ ಅವಶ್ಯಕತೆ ಇದೆ. ಆದರೆ ಅವರ ಬಳಿ ಈಗಲೂ ಅಕ್ಷರ್ ಪಟೇಲ್ ಮತ್ತು ವಿಪ್ರಜ್ ನಿಗಮ್ ಅವರಂತಹ ಸ್ಪಿನ್ನರ್‌ಗಳಿದ್ದಾರೆ. ಕೇವಲ ಬೆಂಚ್ ಕಾಯಿಸಲು ರಾಹುಲ್ ಚಹರ್ ಅವರನ್ನು ತಂದು, ತಮ್ಮ ಆಡುವ 11 ರ ಬಳಗದಲ್ಲಿರಬೇಕಾದ ಅಶುತೋಷ್ ಶರ್ಮಾ ಅವರನ್ನು ಕಳೆದುಕೊಳ್ಳುವುದು ಎಷ್ಟು ಸರಿ?” ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.
ಈ ವದಂತಿಯ ಬಗ್ಗೆ ತೀವ್ರ ಅನುಮಾನಗಳಿದ್ದರೂ, ಐಪಿಎಲ್ ಹರಾಜು ಮತ್ತು ಟ್ರೇಡ್‌ಗಳಲ್ಲಿ ತೆರೆಯ ಹಿಂದೆ ಏನೇನೋ ನಡೆಯಬಹುದು ಎಂಬುದನ್ನು ಅಶ್ವಿನ್ ತಳ್ಳಿಹಾಕಿಲ್ಲ. ಒಂದೊಮ್ಮೆ ಈ ಟ್ರೇಡ್, ಅಂದರೆ ದೀಪಕ್ ಚಹರ್ ಅಥವಾ ರಾಹುಲ್ ಚಹರ್ ಹಾಗೂ ಅಶುತೋಷ್ ಶರ್ಮಾ ನಡುವಿನ ವಿನಿಮಯ ಒಪ್ಪಂದ ಅಧಿಕೃತವಾಗಿ ನಡೆದೇ ಹೋದರೆ, ಇದು “ಮನುಕುಲದ ಇತಿಹಾಸದಲ್ಲಿಯೇ ಹಾಗೂ ಐಪಿಎಲ್ ಇತಿಹಾಸದಲ್ಲಿಯೇ ಅತಿದೊಡ್ಡ ಹೈಸ್ಟ್ (ದರೋಡೆ)” ಆಗಲಿದೆ ಎಂದು ಬಣ್ಣಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಸ್ಪಿನ್ನರ್ ಬೇಕಿದ್ದರೆ ಮುಂದಿನ ಹರಾಜಿನಲ್ಲಿ ಖರೀದಿಸಲು ಪ್ರಯತ್ನಿಸಬಹುದು ಬಿಟ್ಟರೆ, ಈ ರೀತಿಯ ಅವೈಜ್ಞಾನಿಕ ವಿನಿಮಯ ಮಾಡಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂಬುದು ಆರ್ ಅಶ್ವಿನ್ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.
ಇದನ್ನೂ ಓದಿ : ರಾಮ ಮಂದಿರ ದೇಣಿಗೆ ಅಕ್ರಮ : 8 ಆರೋಪಿಗಳ ಮನೆಗಳ ಮೇಲೆ ಏಕಕಾಲಕ್ಕೆ ಪೊಲೀಸ್ ದಾಳಿ!



















