ಪುಣೆ : ಪುಣೆಯ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯು ದಿನೇ ದಿನೇ ಹೊಸ ಹೊಸ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಹಾಗೂ ಚೇತನ್ ಚೌಧರಿ ನಡುವಿನ ವೈಯಕ್ತಿಕ ಸಂಪರ್ಕದ ಹಿಂದಿನ ಅಚ್ಚರಿಯ ವಿಚಾರಗಳನ್ನು ಪೊಲೀಸರು ಭೇದಿಸಿದ್ದಾರೆ. ಇವರಿಬ್ಬರ ಪರಿಚಯಕ್ಕೆ ಕ್ರಿಕೆಟ್ ಕೊಂಡಿಯಾಗಿತ್ತು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಚೇತನ್ ಓರ್ವ ಕ್ರಿಕೆಟ್ ಆಟಗಾರನಾಗಿದ್ದು, ಸಿಯಾಳ ಅಣ್ಣ ಸಾಹಿಲ್ ಗೋಯಲ್ ಜೊತೆ ಪಂದ್ಯಗಳನ್ನು ಆಡುತ್ತಿದ್ದ. ತನ್ನ ಅಣ್ಣನ ಆಟವನ್ನು ನೋಡಲು ಸಿಯಾ ಆಗಾಗ್ಗೆ ಮೈದಾನಕ್ಕೆ ಹೋಗುತ್ತಿದ್ದಳು. ಇದೇ ಸಂದರ್ಭದಲ್ಲಿ ಸಿಯಾ ಮತ್ತು ಚೇತನ್ ನಡುವೆ ಮೊದಲ ಬಾರಿ ಪರಿಚಯವಾಗಿತ್ತು. ಆ ನಂತರ 2025ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ನೇಹಿತರೊಬ್ಬರು ಆಯೋಜಿಸಿದ್ದ ಪಾರ್ಟಿಯಲ್ಲಿ ಇಬ್ಬರೂ ಮತ್ತೆ ಭೇಟಿಯಾಗಿದ್ದರು. ಈ ಭೇಟಿಯ ನಂತರ ಅವರ ನಡುವಿನ ಒಡನಾಟ ಗಣನೀಯವಾಗಿ ಹೆಚ್ಚಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.
238 ಗಂಟೆ 2,004 ಕರೆಗಳ ವಿನಿಮಯ
ಆರೋಪಿಗಳಿಬ್ಬರ ಕಾಲ್ ಡೇಟಾ ರೆಕಾರ್ಡ್ (ಸಿಡಿಆರ್) ಪರಿಶೀಲಿಸಿರುವ ತನಿಖಾಧಿಕಾರಿಗಳಿಗೆ ಬೆಚ್ಚಿಬೀಳಿಸುವ ಮಾಹಿತಿಗಳು ಲಭ್ಯವಾಗಿವೆ. ಜನವರಿಯಿಂದೀಚೆಗೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ನಡುವೆ ಬರೋಬ್ಬರಿ 2,004 ಕರೆಗಳು ವಿನಿಮಯವಾಗಿವೆ. ಒಟ್ಟಾರೆಯಾಗಿ ಸುಮಾರು 238 ಗಂಟೆಗಳ ಕಾಲ ಇವರಿಬ್ಬರು ಫೋನ್ನಲ್ಲಿ ಸುದೀರ್ಘವಾಗಿ ಮಾತನಾಡಿದ್ದು, ಇಬ್ಬರ ನಡುವಿನ ನಿರಂತರ ಸಂಪರ್ಕವನ್ನು ಇದು ದೃಢಪಡಿಸಿದೆ.
ಸಿಯಾ ಸಹೋದರನಿಗೆ 10 ಗಂಟೆಗಳ ಕಾಲ ಗ್ರಿಲ್
ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಸಿಯಾಳ ಸಹೋದರ ಸಾಹಿಲ್ ಗೋಯಲ್ನನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಿದ್ದಾರೆ. ಬೆಳಿಗ್ಗೆಯಿಂದ ಸತತ 10 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿ, ಸಿಯಾ ಮತ್ತು ಚೇತನ್ ನಡುವಿನ ಸಂಬಂಧದ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಸಾಹಿಲ್ಗೆ ಚೇತನ್ ಪರಿಚಯವಿದ್ದ ಕಾರಣ ಹಲವು ವಿಚಾರಗಳನ್ನು ತಾಳೆ ಹಾಕಲಾಗಿದೆ. ತಡರಾತ್ರಿ ಆತನನ್ನು ಮನೆಗೆ ಕಳುಹಿಸಲಾಗಿದ್ದು, ಸಿಯಾಳ ಇತರ ಸಂಬಂಧಿಕರ ಹೇಳಿಕೆಗಳನ್ನು ಸಹ ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಡಿಲೀಟ್ ಆದ ಚಾಟ್ಗಳ ಫೋರೆನ್ಸಿಕ್ ಪರಿಶೀಲನೆ
ಡಿಜಿಟಲ್ ಸಾಕ್ಷ್ಯಾಧಾರಗಳತ್ತ ಮುಖ ಮಾಡಿರುವ ಪೊಲೀಸರಿಗೆ, ಆರೋಪಿಗಳಿಬ್ಬರೂ ತಮ್ಮ ಮೊಬೈಲ್ನಿಂದ ಸಂಭಾಷಣೆ ಮತ್ತು ಆನ್ಲೈನ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ಅಳಿಸಿಹಾಕಿರುವುದು ಕಂಡುಬಂದಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇರಿದಂತೆ ರೀಸೈಕಲ್ ಬಿನ್ನಲ್ಲಿದ್ದ ದತ್ತಾಂಶಗಳನ್ನೂ ನಾಶಪಡಿಸಲಾಗಿದೆ. ಹೀಗಾಗಿ, ಅಳಿಸಿಹೋಗಿರುವ ಈ ಎಲ್ಲಾ ಮಾಹಿತಿಯನ್ನು ಮತ್ತು ಸಂಭಾಷಣೆಗಳ ಕಾಲಘಟ್ಟವನ್ನು ಮರುಪಡೆಯಲು ಮೊಬೈಲ್ಗಳನ್ನು ಫೋರೆನ್ಸಿಕ್ ತನಿಖೆಗೆ ಒಳಪಡಿಸಲಾಗಿದೆ. ಲೋನಾವಾಲದ ಲೊಹಗಡದಲ್ಲಿ ನಡೆದ ಘಟನೆಗೂ ಮುನ್ನ ಮತ್ತು ನಂತರವೂ ಈ ರೀತಿ ಮಾಹಿತಿ ನಾಶಪಡಿಸಿರುವ ಶಂಕೆ ಇದೆ.
ಕೊಲೆಗೂ ಮುನ್ನಾ ದಿನ ಕೆಫೆಯಲ್ಲಿ ಭೇಟಿ
ಕೇತನ್ ಅಗರ್ವಾಲ್ ಸಾವಿಗೀಡಾಗುವ ಒಂದು ದಿನದ ಮುಂಚೆ, ಅಂದರೆ ಜೂನ್ 17ರಂದು ಪುಣೆಯ ಲುಲ್ಲಾನಗರದ ಕೆಫೆಯೊಂದರಲ್ಲಿ ಸಿಯಾ ಮತ್ತು ಚೇತನ್ ಭೇಟಿಯಾಗಿದ್ದರು. ಸಂಜೆ 4.30ರಿಂದ 5.30ರವರೆಗೆ ಸುಮಾರು ಒಂದು ಗಂಟೆ ಕಾಲ ಇಬ್ಬರೂ ಜೊತೆಯಲ್ಲಿದ್ದರು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದು, ಈ ಭೇಟಿಯ ವೇಳೆ ಕೊಲೆಯ ಕುರಿತಾದ ಸಂಚು ರೂಪಿಸಲಾಗಿತ್ತೇ ಎಂಬ ಆಯಾಮದಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ : ನೌಕೆ ಮೇಲಿನ ದಾಳಿಗೆ ಅಮೆರಿಕ ಪ್ರತೀಕಾರ : ಇರಾನ್ ಕ್ಷಿಪಣಿ, ಡ್ರೋನ್ ನೆಲೆಗಳ ಮೇಲೆ ಮತ್ತೆ ದಾಳಿ!



















