ಬೆಲ್‌ಫಾಸ್ಟ್ : ಇಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 34 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ, ಟೀಮ್ ಇಂಡಿಯಾದ ನೂತನ ನಾಯಕ ಶ್ರೇಯಸ್ ಐಯ್ಯರ್ ತಮ್ಮ ಸಹ ಆಟಗಾರರಿಗೆ ಕಟ್ಟುನಿಟ್ಟಾದ ಎಚ್ಚರಿಕೆ ರವಾನಿಸಿದ್ದಾರೆ.
ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಐರ್ಲೆಂಡ್ ಭರ್ಜರಿ ಜಯ ದಾಖಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ನಾಯಕನಾಗಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಸೋಲಿನ ರುಚಿ ಕಂಡಿರುವ ಶ್ರೇಯಸ್ ಐಯ್ಯರ್, ಮುಂದಿನ ಪಂದ್ಯಗಳಲ್ಲಿ ಯಾವುದೇ ತಂಡವನ್ನು ಅಥವಾ ಪರಿಸ್ಥಿತಿಯನ್ನು ಹಗುರವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದ್ದಾರೆ. ಈ ಸೋಲಿನೊಂದಿಗೆ 2 ಪಂದ್ಯಗಳ ಟಿ-20 ಸರಣಿಯಲ್ಲಿ ಆತಿಥೇಯ ಐರ್ಲೆಂಡ್ 1-0 ಅಂತರದಿಂದ ಅಚ್ಚರಿಯ ಮುನ್ನಡೆ ಸಾಧಿಸಿದೆ.
ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ನಾಯಕ ಶ್ರೇಯಸ್ ಐಯ್ಯರ್, ಪ್ರತಿಯೊಂದು ಪಂದ್ಯದಲ್ಲೂ ನಾವು ಕಠಿಣ ಪರಿಶ್ರಮ ಪಡಬೇಕಿದೆ ಮತ್ತು ವರ್ತಮಾನದಲ್ಲಿ ಜೀವಿಸುವುದು ಅತಿಮುಖ್ಯವಾಗಿದೆ ಎಂದು ಒತ್ತಿ ಹೇಳಿದರು. ಯಾವುದೇ ಪರಿಸ್ಥಿತಿಯನ್ನು ನಮ್ಮ ಹಕ್ಕು ಅಥವಾ ತೀರಾ ಸುಲಭ ಎಂದು ಗ್ರಹಿಸಬಾರದು ಎಂದ ಅವರು, ಎದುರಾಳಿಗಳನ್ನು ಆದಷ್ಟು ಮಟ್ಟಿಗೆ ಕಟ್ಟಿಹಾಕಲು ನಾವೆಲ್ಲರೂ ಮುಂದಾಗಬೇಕು ಎಂಬ ಸೂಚನೆ ನೀಡಿದ್ದಾರೆ.
ಹಾಲಿ ಟಿ-20 ವಿಶ್ವ ಚಾಂಪಿಯನ್ ಆಗಿರುವ ಭಾರತ ತಂಡದ ಎದುರು ಐರ್ಲೆಂಡ್ ಸಾಧಿಸಿರುವ ಈ ಗೆಲುವು ಆ ದೇಶದ ಕ್ರಿಕೆಟ್ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮೈಲಿಗಲ್ಲಾಗಿದೆ. ಭಾನುವಾರದ ಅಂತಿಮ ಪಂದ್ಯದಲ್ಲಿ ಗೆದ್ದೇ ತೀರಬೇಕಾದ ಒತ್ತಡ ಇದೀಗ ಭಾರತದ ಮೇಲಿದ್ದು, ಸರಣಿ ಸೋಲಿನ ಮುಖಭಂಗದಿಂದ ಪಾರಾಗಲು ಶ್ರೇಯಸ್ ಪಡೆ ಸರ್ವಪ್ರಯತ್ನ ಮಾಡಬೇಕಿದೆ.
ಉತ್ತಮ ಮೊತ್ತ ಕಲೆ ಹಾಕಿದ್ದ ಐರ್ಲೆಂಡ್
ಆರಂಭಿಕ ಆಘಾತಗಳ ನಡುವೆಯೂ ಐರ್ಲೆಂಡ್ ತಂಡವು ಅತ್ಯುತ್ತಮವಾಗಿ ಪುಟಿದೆದ್ದು ಬೃಹತ್ ಮೊತ್ತ ಕಲೆಹಾಕಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಕೇವಲ 51 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಐರ್ಲೆಂಡ್, ನೂತನ ನಾಯಕ ಲೋರ್ಕನ್ ಟಕರ್ ಅವರ ಜವಾಬ್ದಾರಿಯುತ 50 ರನ್ ಹಾಗೂ ಗ್ಯಾರೆತ್ ಡೆಲನಿ ಅವರ ಅಬ್ಬರದ 49 ರನ್‌ಗಳ ಬಲದಿಂದ ನಿಗದಿತ 20 ಓವರ್ ಗಳಲ್ಲಿ 182 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಭಾರತದ ಪರ ಬೌಲಿಂಗ್ ನಲ್ಲಿ ಮಿಂಚಿದ ಹರ್ಷಿತ್ ರಾಣಾ 24 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದು ಎದುರಾಳಿಗಳನ್ನು ಕಾಡಿದರು. ಆದರೆ, ಪ್ರಸಿದ್ಧ್ ಕೃಷ್ಣ ಮತ್ತು ವಾಷಿಂಗ್ಟನ್ ಸುಂದರ್ ಅವರ ದುಬಾರಿ ಓವರ್ ಗಳು ಐರ್ಲೆಂಡ್ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ವರದಾನವಾದವು.
183 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಯುವ ಆಟಗಾರ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸ್ಪೋಟಕ ಆರಂಭ ಒದಗಿಸಿದ್ದರು. ಪವರ್‌ಪ್ಲೇನಲ್ಲಿ 68 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ತಂಡವು, ನಂತರ ದಿಢೀರ್ ಕುಸಿತ ಕಂಡಿತು. ಪದಾರ್ಪಣೆ ಮಾಡಿದ ಜೈ ಮೂಂದ್ರಾ ಅವರು ಸಂಜು ಸ್ಯಾಮ್ಸನ್ ಅವರ ಅಮೂಲ್ಯ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ನಾಯಕ ಶ್ರೇಯಸ್ ಐಯ್ಯರ್ ಸೇರಿದಂತೆ, ತಿಲಕ್ ವರ್ಮಾ, ಶಿವಂ ದುಬೆ ಹಾಗೂ ಕೆಳ ಕ್ರಮಾಂಕದ ಬ್ಯಾಟರ್ ಗಳು ಉತ್ತಮ ಜೊತೆಯಾಟವಾಡುವಲ್ಲಿ ವಿಫಲರಾದ ಪರಿಣಾಮ ಟೀಮ್ ಇಂಡಿಯಾದ ಇನ್ನಿಂಗ್ಸ್ ಕೇವಲ 148 ರನ್‌ಗಳಿಗೆ ಮುಕ್ತಾಯವಾಯಿತು. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಇದೇ ಮೊದಲ ಬಾರಿಗೆ ಭಾರತದಂತಹ ದೈತ್ಯ ತಂಡವನ್ನು ಮಣಿಸಿದ ಐರ್ಲೆಂಡ್ ಆಟಗಾರರು ಇದೀಗ ಸರಣಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಭಾರತ ತಿರುಗೇಟು ನೀಡಲಿದೆಯೇ ಅಥವಾ ಐರ್ಲೆಂಡ್ ಮತ್ತೊಂದು ಇತಿಹಾಸ ನಿರ್ಮಿಸಲಿದೆಯೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ : ಐರ್ಲೆಂಡ್ ವಿರುದ್ಧ ಸೂರ್ಯವಂಶಿಗೆ ಕೈತಪ್ಪಿದ ಅವಕಾಶ : ಭುಗಿಲೆದ್ದ ಕ್ರೀಡಾಭಿಮಾನಿಗಳ ಆಕ್ರೋಶ!



















