ಬೆಂಗಳೂರು: ಹಲವು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದ್ದ ಜೆಸಿ ರಸ್ತೆಯ ಸ್ಟೀಲ್ ಬ್ರಿಡ್ಜ್ ಯೋಜನೆಗೆ ರಾಜ್ಯ ಸರ್ಕಾರ ಅಂತಿಮವಾಗಿ ಬ್ರೇಕ್ ಹಾಕಿದೆ. ಅದರ ಬದಲಿಗೆ ಹೊಸ ವಿನ್ಯಾಸದ ನಾಲ್ಕು ಪಥದ ಕಾಂಕ್ರೀಟ್ ಫ್ಲೈಓವರ್ ನಿರ್ಮಾಣಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಸುಮಾರು ₹350 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಯಾಗಲಿದೆ.
ಸುಮಾರು 2.8 ಕಿ.ಮೀ. ಉದ್ದದ ಈ ಫ್ಲೈಓವರ್‌ನಲ್ಲಿ 88 ಪಿಲ್ಲರ್‌ಗಳು ನಿರ್ಮಾಣವಾಗಲಿವೆ. ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ ಫ್ಲೈಓವರ್ ಮಾದರಿಯಲ್ಲಿ ಕಾಮಗಾರಿ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಯೋಜನೆ ರೂಪಿಸಿದೆ. ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ಕಳೆದ ಐದು ವರ್ಷಗಳಿಂದ ಸ್ಟೀಲ್ ಬ್ರಿಡ್ಜ್ ಪ್ರಸ್ತಾವನೆ ತಾಂತ್ರಿಕ ಹಾಗೂ ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಆ ಯೋಜನೆಯನ್ನು ಕೈಬಿಟ್ಟು ಕಾಂಕ್ರೀಟ್ ಫ್ಲೈಓವರ್ ನಿರ್ಮಿಸಲು ನಿರ್ಧರಿಸಲಾಗಿದೆ.
ಈಗಾಗಲೇ ನಿರ್ಮಾಣಗೊಂಡಿರುವ ವೈಟ್ ಟಾಪಿಂಗ್ ರಸ್ತೆಗೆ ಯಾವುದೇ ಹಾನಿಯಾಗದಂತೆ ಯೋಜನೆ ರೂಪಿಸಲಾಗಿದೆ. ಫ್ಲೈಓವರ್‌ಗೆ ಆರ್.ವಿ. ರಸ್ತೆ, ಡಯಾಗ್ನಲ್ ರಸ್ತೆ ಹಾಗೂ ನೃಪತುಂಗ ರಸ್ತೆಯಲ್ಲಿ ಅಪ್‌ರ್ಯಾಂಪ್‌ಗಳನ್ನು ಹಾಗೂ ಕೆ.ಜಿ. ರಸ್ತೆ, ಕಸ್ತೂರಬಾ ರಸ್ತೆ ಹಾಗೂ ಆರ್.ವಿ. ರಸ್ತೆಯ ಬಳಿ ಡೌನ್‌ರ್ಯಾಂಪ್‌ಗಳನ್ನು ನಿರ್ಮಿಸಲಾಗುತ್ತದೆ.
ಪ್ರಸ್ತುತ ಮಿನರ್ವ ವೃತ್ತದಿಂದ ಹಡ್ಸನ್ ವೃತ್ತ ತಲುಪಲು 30–40 ನಿಮಿಷಗಳು ಬೇಕಾಗುತ್ತಿದ್ದು, ಹೊಸ ಫ್ಲೈಓವರ್ ನಿರ್ಮಾಣವಾದರೆ ಈ ಅಂತರವನ್ನು ಸುಮಾರು 5 ನಿಮಿಷಗಳಲ್ಲಿ ಕ್ರಮಿಸಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಸ್ಟೀಲ್ ಬ್ರಿಡ್ಜ್ ಯೋಜನೆಗೆ ತೆರೆಬಿದ್ದಿದ್ದು, ಹೊಸ ಕಾಂಕ್ರೀಟ್ ಫ್ಲೈಓವರ್ ಮೂಲಕ ನಗರದ ಮಧ್ಯಭಾಗದ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



















