ನವದೆಹಲಿ: ದೇಶದ ರಸ್ತೆಗಳಲ್ಲಿ ವಾಹನ ಸವಾರರ ಸೌಕರ್ಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಇನ್ಮುಂದೆ ಪಾದಚಾರಿಗಳ ಸುರಕ್ಷತೆಗೂ ನೀಡಲೇಬೇಕು ಎಂಬ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಸಾರ್ವಜನಿಕ ರಸ್ತೆಗಳಲ್ಲಿ ಸುರಕ್ಷಿತ ಹಾಗೂ ಪ್ರತ್ಯೇಕ ಪಾದಚಾರಿ ಮಾರ್ಗಗಳಲ್ಲಿ (Footpaths) ಸಂಚರಿಸುವುದು ನಾಗರಿಕರ ಮೂಲಭೂತ ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಸಂವಿಧಾನದ ವಿಧಿ 19 ಮತ್ತು 21ರ ಅಡಿಯಲ್ಲಿ ಈ ಹಕ್ಕನ್ನು ಖಾತರಿಪಡಿಸಲಾಗಿದ್ದು, ಮೋಟಾರು ವಾಹನಗಳ ಸವಲತ್ತಿಗಿಂತ ಪಾದಚಾರಿಗಳ ಹಕ್ಕೇ ಮೇಲುಗೈ ಸಾಧಿಸಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದೂರ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ದೇಶದ ನಗರಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ ನಗರಾಭಿವೃದ್ಧಿ ಯೋಜನೆಗಳು ಕೇವಲ ಮೋಟಾರು ವಾಹನಗಳಿಗೆ ಆದ್ಯತೆ ನೀಡುತ್ತಿದ್ದು, ರಸ್ತೆಯಲ್ಲಿ ನಡೆಯುವ ಸಾಮಾನ್ಯ ಜನರನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಸುರಕ್ಷಿತ ಪಾದಚಾರಿ ಮಾರ್ಗಗಳ ಕೊರತೆಯು ಇಂದಿನ “ನಾಗರಿಕತೆಯ ಅತಿ ದೊಡ್ಡ ಸಮಸ್ಯೆ” ಎಂದು ಪೀಠವು ತೀವ್ರ ಕಳವಳ ವ್ಯಕ್ತಪಡಿಸಿದೆ. ಸಾರ್ವಜನಿಕ ಸ್ಥಳಗಳನ್ನು ಕೇವಲ ವಾಹನ ಸವಾರರಷ್ಟೇ ಏಕಸ್ವಾಮ್ಯ ಮಾಡಿಕೊಳ್ಳಲು ಸಾಧ್ಯವಿಲ್ಲ. ರಸ್ತೆಗಳಲ್ಲಿ ಪಾದಚಾರಿಗಳನ್ನು ಒಂದು ಅಡಚಣೆಯಂತೆ ಕಾಣುವ ಪ್ರವೃತ್ತಿ ಇನ್ನು ಮುಂದೆ ನಿಲ್ಲಬೇಕು ಎಂದು ಕೋರ್ಟ್ ಖಡಕ್ ಆದೇಶ ನೀಡಿದೆ.
ಸ್ಥಳೀಯ ಸಂಸ್ಥೆಗಳ ಮೇಲಿದೆ ಕಡ್ಡಾಯ ಹೊಣೆಗಾರಿಕೆ
ಯಾವ ಕಡೆಗಳಲ್ಲಿ ಸಾರ್ವಜನಿಕ ರಸ್ತೆಗಳಿರುತ್ತವೆಯೋ ಅಲ್ಲೆಲ್ಲಾ ಕಡ್ಡಾಯವಾಗಿ ಪಾದಚಾರಿ ಮಾರ್ಗಗಳನ್ನು ಗುರುತಿಸಿ, ಅವುಗಳನ್ನು ಸೂಕ್ತವಾಗಿ ನಿರ್ವಹಿಸುವುದು ಆಯಾ ಭಾಗದ ಸಾರ್ವಜನಿಕ ಸಂಸ್ಥೆಗಳ ಕಾನೂನಾತ್ಮಕ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳು, ಮಹಾನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯತ್‌ಗಳನ್ನು ಈ ಪಾದಚಾರಿ ಮೂಲಸೌಕರ್ಯದ ಪ್ರಾಥಮಿಕ ಹೊಣೆಗಾರರನ್ನಾಗಿ ನ್ಯಾಯಾಲಯ ಗುರುತಿಸಿದೆ. ಒಂದು ವೇಳೆ ಈ ಸಂಸ್ಥೆಗಳು ಸುರಕ್ಷಿತ ನಡಿಗೆಯ ಜಾಗವನ್ನು ಕಲ್ಪಿಸಲು ವಿಫಲವಾದರೆ, ನಾಗರಿಕರು ಕಾನೂನುಬದ್ಧ ಪರಿಹಾರವನ್ನು ಕೋರಬಹುದು. ಇದರ ಜೊತೆಗೆ, ಅಪಘಾತ ಸಂಭವಿಸಿದಾಗ ಮೋಟಾರು ವಾಹನ ಕಾಯ್ದೆಯಡಿ ಸೂಕ್ತ ಪರಿಹಾರವನ್ನು ಪಡೆಯುವ ಹಕ್ಕನ್ನು ನಾಗರಿಕರು ಹೊಂದಿರುತ್ತಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಾಯ್ದೆ ರೂಪಿಸಲು ಕಾನೂನು ಆಯೋಗಕ್ಕೆ ಸೂಚನೆ
ತನ್ನ ತಂದೆಯೊಂದಿಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ 5 ವರ್ಷದ ಮಗು, ಪಾದಚಾರಿ ಮಾರ್ಗವಿಲ್ಲದ ರಸ್ತೆಯಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದು ಮೃತಪಟ್ಟ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಗಂಭೀರ ಅವಲೋಕನಗಳನ್ನು ಮಾಡಿದೆ. ಈ ಹಿಂದೆ ಹೈಕೋರ್ಟ್ ಮಗುವಿನ ಕುಟುಂಬಕ್ಕೆ ನೀಡಬೇಕಿದ್ದ ಪರಿಹಾರದ ಮೊತ್ತವನ್ನು ಕಡಿತಗೊಳಿಸಿತ್ತು. ಅದನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಪರಿಹಾರದ ಮೊತ್ತವನ್ನು 11.44 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಇದೇ ವೇಳೆ ದೇಶದಲ್ಲಿ ಪಾದಚಾರಿಗಳ ಹಕ್ಕುಗಳನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ಚೌಕಟ್ಟು ಇಲ್ಲದಿರುವುದನ್ನು ಮನಗಂಡ ನ್ಯಾಯಾಲಯ, ಇದಕ್ಕಾಗಿ ನಿಯಂತ್ರಕ ಮಂಡಳಿಯನ್ನು ರಚಿಸಲು ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸುವಂತೆ ಸಂಬಂಧಪಟ್ಟ ಸಚಿವಾಲಯಗಳು ಮತ್ತು ಭಾರತೀಯ ಕಾನೂನು ಆಯೋಗಕ್ಕೆ ತೀರ್ಪಿನ ಪ್ರತಿಯನ್ನು ರವಾನಿಸಲು ಆದೇಶಿಸಿದೆ. ಅಡ್ವೊಕೇಟ್ ಮಾಮಿಡಿಪುಡಿ ವಿ. ಮುಕುಂದ ಅವರು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಮಿಕಸ್ ಕ್ಯೂರಿಯಾಗಿ ನೆರವಾಗಿದ್ದಾರೆ.



















