ಪುಣೆ: ಮುಂದಿನ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವ ಉದ್ಯಮಿ, ತಮ್ಮ ಭಾವೀ ಪತ್ನಿ ಹಾಗೂ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಗ ದುರಂತ ಅಂತ್ಯ ಕಂಡ ಘಟನೆ ಮಹಾರಾಷ್ಟ್ರದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ ನಡೆದಿದೆ. ಕೋಟೆಯಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ 400 ಅಡಿ ಆಳದ ಪ್ರಪಾತಕ್ಕೆ ಬಿದ್ದು 26 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ನಿಶ್ಚಿತಾರ್ಥವಾಗಿದ್ದ ಯುವತಿಯ ಜನ್ಮದಿನ ಆಚರಣೆಯ ಭಾಗವಾಗಿ ಹಮ್ಮಿಕೊಂಡಿದ್ದ ಈ ಪ್ರವಾಸ, ಕೆಲವೇ ಕ್ಷಣಗಳಲ್ಲಿ ಎರಡೂ ಕುಟುಂಬಗಳ ಪಾಲಿಗೆ ಎಂದೂ ಮರೆಯಲಾಗದ ಕರಾಳ ದಿನವಾಗಿ ಮಾರ್ಪಟ್ಟಿದೆ.
ಹುಟ್ಟುಹಬ್ಬದ ಸಂಭ್ರಮದ ನಡುವೆ ದುರಂತ
ಪುಣೆಯ ಗಹುಂಜೆ ನಿವಾಸಿಯಾದ ಕೇತನ್ ವಿಶಾಲ್ ಅಗರ್ವಾಲ್ ಮೃತ ದುರ್ದೈವಿ. ತಮ್ಮ ಕುಟುಂಬದ ರಿಯಲ್ ಎಸ್ಟೇಟ್ ವ್ಯವಹಾರದ ನಿರ್ದೇಶಕರಾಗಿದ್ದ ಕೇತನ್, ಗುರುವಾರ ತಮ್ಮ ಭಾವಿ ಪತ್ನಿ ಹಾಗೂ ಇಬ್ಬರು ಸ್ನೇಹಿತರೊಂದಿಗೆ ಮಾವಳ್ ತಹಸಿಲ್‌ನಲ್ಲಿರುವ ಐತಿಹಾಸಿಕ ಲೋಹಗಢ ಕೋಟೆಗೆ ಚಾರಣ ಕೈಗೊಂಡಿದ್ದರು. ತಮ್ಮ ಭಾವೀ ಪತ್ನಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಈ ಪ್ರವಾಸವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ ಸುಮಾರು 11.20ರ ಸುಮಾರಿಗೆ ಕೋಟೆಯ ಕಡಿದಾದ ಕಮರಿಯ ಅಂಚಿನಲ್ಲಿ ನಿಂತು ಕೇತನ್ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಅಲ್ಲಿ ಬೀಸುತ್ತಿದ್ದ ಭಾರಿ ಗಾಳಿಗೆ ಸಿಲುಕಿ ಹತೋಟಿ ತಪ್ಪಿದ ಅವರು, ನೇರವಾಗಿ 400 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದಾರೆ. ಭಾವಿ ಪತ್ನಿ ಹಾಗೂ ಸ್ನೇಹಿತರ ಕಣ್ಣೆದುರೇ ಈ ಘೋರ ದುರಂತ ಸಂಭವಿಸಿದೆ.
ಉದಯಪುರ ಅರಮನೆಯಲ್ಲಿ ನಿಗದಿಯಾಗಿದ್ದ ವಿವಾಹ
ಕೇತನ್ ಅವರ ಈ ಸಾವು ಎರಡೂ ಕುಟುಂಬಗಳನ್ನು ತೀವ್ರ ಆಘಾತಕ್ಕೆ ತಳ್ಳಿದೆ. ಕೇತನ್ ಹಾಗೂ ಯುವತಿಗೆ ನವೆಂಬರ್ ತಿಂಗಳಿನಲ್ಲಿ ಅದ್ಧೂರಿ ವಿವಾಹ ನಿಶ್ಚಯವಾಗಿತ್ತು. ಮದುವೆ ಸಮಾರಂಭಕ್ಕಾಗಿ ರಾಜಸ್ಥಾನದ ಉದಯಪುರದಲ್ಲಿ ಭವ್ಯವಾದ ಅರಮನೆಯೊಂದನ್ನು ಬುಕ್ ಮಾಡಲಾಗಿತ್ತು. ಮದುವೆಯ ಎಲ್ಲಾ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿದ್ದ ನಡುವೆಯೇ ಈ ಸಾವು ಸಂಭವಿಸಿರುವುದು ಇಡೀ ಕುಟುಂಬದ ಸಂತಸವನ್ನು ಕಸಿದುಕೊಂಡಿದೆ.
3 ಗಂಟೆಗಳ ಕಾಲ ನಡೆದ ಕಠಿಣ ರಕ್ಷಣಾ ಕಾರ್ಯಾಚರಣೆ
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಹಾಗೂ ‘ಶಿವದುರ್ಗ್ ಮಿತ್ರ ತುರ್ತು ರಕ್ಷಣಾ ತಂಡ’ದ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿದರು. ಕಡಿದಾದ ಬೆಟ್ಟದ ಇಳಿಜಾರು, ದಟ್ಟವಾದ ಗಿಡಗಂಟಿಗಳು ಹಾಗೂ ಪ್ರತಿಕೂಲ ವಾತಾವರಣದ ನಡುವೆಯೂ ರಕ್ಷಣಾ ಸಿಬ್ಬಂದಿ ಸತತ ಮೂರು ಗಂಟೆಗಳ ಕಾಲ ಅತ್ಯಂತ ಶ್ರಮದಾಯಕ ಕಾರ್ಯಾಚರಣೆ ನಡೆಸಿದರು. ಕೊನೆಗೂ ಕಣಿವೆಯ ಆಳದಿಂದ ಯುವಕನ ಮೃತದೇಹವನ್ನು ಹೊರತೆಗೆಯುವಲ್ಲಿ ತಂಡ ಯಶಸ್ವಿಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಲೋನಾಲ್ವಾ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



















