ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮಸ್ಥರು SLR ಕಂಪನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎರಡು ದಿನಗಳ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದಾರೆ.
ಲೋಕಪ್ಪನಹೊಲ ಗ್ರಾಮದ ಸಮೀಪ ಕಾರ್ಯನಿರ್ವಹಿಸುತ್ತಿರುವ SLR ಕಂಪನಿ ನೂರಾರು ಎಕರೆ ಸರ್ಕಾರಿ ಜಮೀನನ್ನು ಅತಿಕ್ರಮಿಸಿಕೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಜಮೀನಿನಲ್ಲಿ ಈ ಹಿಂದೆ ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ.
ಸರ್ಕಾರಿ ಭೂಮಿ ಕಂಪನಿ ವಶಕ್ಕೆ ಹೋದ ಪರಿಣಾಮ ಗ್ರಾಮಸ್ಥರು ಹಾಗೂ ರೈತರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಜನ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ, ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇದಲ್ಲದೆ, ರೈತರು ಬಳಸುತ್ತಿದ್ದ ಬಂಡಿ ರಸ್ತೆಯನ್ನು ಕೂಡ ಕಂಪನಿ ಆಕ್ರಮಿಸಿಕೊಂಡಿದೆ ಎಂದು ಆರೋಪಿಸಲಾಗಿದ್ದು, ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ.
ಕೈಗಾರಿಕೆಯಿಂದ ಹೊರಬರುವ ಧೂಳಿನ ಕಣಗಳಿಂದ ಗ್ರಾಮಸ್ಥರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಪಾದಯಾತ್ರೆಯಲ್ಲಿ ಭಾಗವಹಿಸಿದವರು ಹೇಳಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಸರ್ಕಾರಿ ಭೂಮಿ ಅತಿಕ್ರಮಣ ಸೇರಿದಂತೆ ವಿವಿಧ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ SLR ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ : BWSSB ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ – 40 ಅಡಿ ಆಳದ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ನಾಪತ್ತೆ!



















