ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ರೂಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಅಧಿಕಾರಿಗಳೊಂದಿಗೆ ಮಹತ್ವದ ಪರಿಶೀಲನಾ ಸಭೆ ನಡೆಸಿದರು.
ನಗರದಲ್ಲಿ ರಸ್ತೆ ಬದಿಯಲ್ಲಿ ಬಿದ್ದಿರುವ ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳು ಹಾಗೂ ಬೆಳೆದಿರುವ ಕಳೆಗಳನ್ನು ವಿಶೇಷ “ಒನ್‌ಟೈಮ್ ಡ್ರೈವ್” ಮೂಲಕ ಸಂಪೂರ್ಣ ತೆರವುಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಮನೆ-ಮನೆಗೆ ಆಟೋ ಟಿಪ್ಪರ್‌ಗಳು ತೆರಳಿ ಕಸ ಸಂಗ್ರಹಿಸುತ್ತಿದ್ದರೂ ಸಾರ್ವಜನಿಕರು ರಸ್ತೆ ಬದಿಯಲ್ಲೇ ಕಸ ಎಸೆಯುತ್ತಿರುವುದು ಕಳವಳಕಾರಿ. ಕಸ ವಿಂಗಡಣೆ ಕಡ್ಡಾಯಗೊಳಿಸಲು ಕಟ್ಟುನಿಟ್ಟಿನ ಜಾರಿ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರಸ್ತುತ ಕಸ ನಿರ್ವಹಣೆ ವ್ಯವಸ್ಥೆಯಲ್ಲಿ ಹಲವು ಸಮಸ್ಯೆಗಳಿದ್ದು, ಗ್ರೌಂಡ್ ಲೆವೆಲ್‌ನಲ್ಲಿ ಇರುವ ತೊಂದರೆಗಳನ್ನು ತಕ್ಷಣ ಬಗೆಹರಿಸಬೇಕು. ಲಭ್ಯವಿರುವ ವಾಹನಗಳು ಮತ್ತು ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಸಿಕೊಂಡು ಕಸ ಸಂಗ್ರಹ ಕಾರ್ಯವನ್ನು ಸುಧಾರಿಸಬೇಕು ಎಂದು ಸೂಚಿಸಿದರು. ಹೊಸ ಕಸ ನಿರ್ವಹಣಾ ವ್ಯವಸ್ಥೆಯ ಪ್ರಸ್ತಾವನೆ ಯಾವ ಹಂತದಲ್ಲಿದೆ, ದ್ವಿತೀಯ ಹಂತದ ತ್ಯಾಜ್ಯ ಸಂಸ್ಕರಣಾ ಪ್ರಕ್ರಿಯೆ (Secondary Processing) ಕುರಿತು ಪ್ರಗತಿ ಪರಿಶೀಲಿಸಿದ ಸಚಿವರು, ವ್ಯವಸ್ಥೆ ಕುಸಿದಿರುವುದನ್ನು ಸರಿಪಡಿಸಲು ಹಿರಿಯ ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಪ್ರತಿ ವಾರ್ಡ್‌ಗೆ ಒಬ್ಬ ಮಾರ್ಷಲ್ ಇದ್ದರೂ ಅವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ನಾಗರಿಕರಲ್ಲಿ ಕಸ ವಿಂಗಡಣೆ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ನಗರದಲ್ಲಿ 2017 ರ ವರೆಗೂ ಎಲ್ಲೂ ಕಸದ ಬುಟ್ಟಿಗಳನ್ನಿಡುವ ಪದ್ಧತಿ ಇರಲಿಲ್ಲ. ಯಾರಿಗೋ ದುಡ್ಡು ಮಾಡಿಕೊಡಲು ಕೆಲವೆಡೆ ಮಾತ್ರ ಬುಟ್ಟಿ ಇಡಲಾಗಿತ್ತು. ಪರಿಣಾಮ ಜನ ಕಸದ ಬುಟ್ಟಿಗೆ ಮಾತ್ರವಲ್ಲದೆ ರಸ್ತೆಯ ಕಂಡಕಂಡಲ್ಲಿ ಕಸ ಎಸೆಯಲು ಶುರು ಮಾಡಿದರು. ಈಗಲೂ ಇದೇ ಪದ್ಧತಿ ಮುಂದುವರೆದಿರುವುದು ಎಲ್ಲಾ ಸಮಸ್ಯೆಗೂ ಮೂಲವಾಗಿದೆ.
ಹಸಿ – ಒಣ ತ್ಯಾಜ್ಯಗಳನ್ನು ಮನೆಗಳಲ್ಲಿ ಜನರೇ ಬೇರ್ಪಡಿಸಿ ಕಸದ ಗಾಡಿಗೆ ನೀಡಬೇಕು, ಕಸದ ಗಾಡಿಯೂ ತ್ಯಾಜ್ಯಗಳನ್ನು ಬೇರ್ಪಡಿಸಿಯೇ ಘಟಕಗಳಿಗೆ ತಲುಪಿಸಬೇಕು. ಹೀಗೆ ವ್ಯವಸ್ಥೆಯ ಅಡಿಪಾಯದಿಂದಲೇ ಬದಲಾವಣೆ ತರುವ ದೂರದೃಷ್ಠಿ ಯೋಜನೆ ಇಲ್ಲದೆ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ್ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ಸಿಒಒ ರಮಾಮಣಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಆರೋಪಿಗಳನ್ನು ಕೇಸ್‌ನಿಂದ ಕೈಬಿಡಲು ಲಂಚಕ್ಕೆ ಬೇಡಿಕೆ ಆರೋಪ – ಡಿವೈಎಸ್ಪಿ, ಕಾನ್ಸ್‌ಟೇಬಲ್ ವಿರುದ್ದ FIR!



















