ಕೊಪ್ಪಳ : ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣ ಗ್ರಾಮ ಪಂಚಾಯಿತಿ ಪಿಡಿಓ ಎನ್. ಶಿವರಾಜ್ ಅವರನ್ನು ವಕೀಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆ ಅಮಾನತು ಮಾಡಲಾಗಿದೆ. ಈ ಕುರಿತು ಕೊಪ್ಪಳ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಆದೇಶ ಹೊರಡಿಸಿದ್ದಾರೆ.
ಗಂಗಾವತಿ ನಿವಾಸಿ ಹಾಗೂ ವಕೀಲರಾದ ಮಲ್ಲೇಶಪ್ಪ ಅವರು ಕಳೆದ ಜೂನ್ 12ರಂದು ಪಿಡಿಓ ಶಿವರಾಜ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಕಾನೂನು ಪದವೀಧರರ ಪಠ್ಯಪುಸ್ತಕಗಳಿಗಾಗಿ ಸಲ್ಲಿಸಿದ್ದ ಅರ್ಜಿ ಹಾಗೂ ಅದಕ್ಕೆ ಮೀಸಲಾದ ಅನುದಾನದ ಬಗ್ಗೆ ಮಾಹಿತಿ ಕೇಳಿದ್ದರು ಎನ್ನಲಾಗಿದೆ.
ಈ ವೇಳೆ ಪಿಡಿಓ ಶಿವರಾಜ್ ಅವರು ವಕೀಲರೊಂದಿಗೆ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಕೀಲರು ಮತ್ತು ಪಿಡಿಓ ನಡುವಿನ ಮಾತುಕತೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಆಡಿಯೋ ವೈರಲ್ ಆದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪಂಚಾಯಿತಿ ಆಡಳಿತ, ಪಿಡಿಓ ವಿರುದ್ಧ ಕ್ರಮ ಕೈಗೊಂಡಿದೆ. ಪ್ರಕರಣದ ಹಿನ್ನೆಲೆ ಹಾಗೂ ಆರೋಪಗಳ ಪರಿಶೀಲನೆಯ ನಂತರ ಯರಡೋಣ ಪಿಡಿಓ ಎನ್. ಶಿವರಾಜ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಕ್ರಮವನ್ನು ಕೊಪ್ಪಳ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಜಾರಿಗೊಳಿಸಿದ್ದಾರೆ.
ಇದನ್ನೂ ಓದಿ : ಆರೋಪಿಗಳನ್ನು ಕೇಸ್‌ನಿಂದ ಕೈಬಿಡಲು ಲಂಚಕ್ಕೆ ಬೇಡಿಕೆ ಆರೋಪ – ಡಿವೈಎಸ್ಪಿ, ಕಾನ್ಸ್‌ಟೇಬಲ್ ವಿರುದ್ದ FIR!



















