ನವದೆಹಲಿ : ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ರಾಜಕೀಯ ಭೂಕಂಪನ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಪಕ್ಷ ಮತ್ತೆ ಹೋಳಾಗುವ ಸಾಧ್ಯತೆ ದಟ್ಟವಾಗಿವೆ. ಕಳೆದ 2022ರಲ್ಲಿ ಏಕನಾಥ್ ಶಿಂಧೆ ನಡೆಸಿದ ಬಂಡಾಯದ ಇತಿಹಾಸವೇ ಈಗ ಸಂಸದರ ಮಟ್ಟದಲ್ಲಿ ಮರುಕಳಿಸುವ ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ ಆಡಳಿತ ಪಕ್ಷದ ವಿರುದ್ಧ “ಕುದುರೆ ವ್ಯಾಪಾರ”ದ ಗಂಭೀರ ಆರೋಪ ಮಾಡಿರುವ ಉದ್ಧವ್ ಬಣ, ಬಂಡಾಯ ಎದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಸದರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಕೋಟಿ ಕೋಟಿ ಹಣದ ಆಫರ್
ಇಂದು ದೆಹಲಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಉದ್ಧವ್ ಬಣದ ಪ್ರಮುಖ ನಾಯಕ ಹಾಗೂ ಸಂಸದ ಸಂಜಯ್ ರಾವತ್, ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪಕ್ಷದ ಸಂಸದರನ್ನು ಸೆಳೆಯಲು ತಲಾ 50 ಕೋಟಿ ರೂಪಾಯಿಗಳ ಆಫರ್ ನೀಡಲಾಗುತ್ತಿದ್ದು, ಈಗಾಗಲೇ 15 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದೆ ಎಂದು ಅವರು ದೂರಿದ್ದಾರೆ. ಅಷ್ಟೇ ಅಲ್ಲದೆ, ಮಹಾರಾಷ್ಟ್ರದ ನಾಂದೇಡ್ ಮತ್ತು ಪುಣೆ ಸೇರಿದಂತೆ ಮೂರು ಪ್ರಮುಖ ಸ್ಥಳಗಳಿಂದ ಸಂಸದರನ್ನು ದೆಹಲಿಗೆ ಕರೆತರಲು ಮಂಗಳವಾರ ಮೂರು ವಿಶೇಷ ಖಾಸಗಿ ವಿಮಾನಗಳನ್ನು ಬಳಸಲಾಗಿದೆ ಎಂದು ರಾವತ್ ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷದೊಳಗೆ ಉದ್ಭವಿಸಿರುವ ಈ ಬಿಕ್ಕಟ್ಟನ್ನು ಎದುರಿಸಲು ಉದ್ಧವ್ ಠಾಕ್ರೆ ತೀವ್ರ ಸಿದ್ಧತೆ ನಡೆಸಿದ್ದಾರೆ. ಜೂನ್ 18ರ ಗುರುವಾರ ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ಪಕ್ಷದ ಎಲ್ಲಾ ಸಂಸದರ ತುರ್ತು ಸಭೆಯನ್ನು ಕರೆಯಲಾಗಿದೆ. ಈ ಸಭೆಗೆ ಗೈರಾಗುವ ಸಂಸದರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವುದಾಗಿ ಪಕ್ಷದ ನಾಯಕತ್ವ ಎಚ್ಚರಿಸಿದೆ. ಇದರೊಂದಿಗೆ, ಬಂಡಾಯ ನಾಯಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಸಿಲುಕಿಸಲು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದ್ದು, ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಲು ಉದ್ಧವ್ ನಿಷ್ಠಾವಂತ ಸಂಸದ ಅರವಿಂದ್ ಸಾವಂತ್ ಸಮಯ ಕೋರಿದ್ದಾರೆ. ಉದ್ಧವ್ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಮುಖ ನೋಡಿ ಜನ ವೋಟ್ ಹಾಕಿದ್ದಾರೆ ಎಂಬುದನ್ನು ಸಂಸದರು ಮರೆಯಬಾರದು ಎಂದು ರಾವತ್ ನೆನಪಿಸಿದ್ದಾರೆ.
ಶಿಂಧೆ ಬಣದ ಸಂಪರ್ಕದಲ್ಲಿ ಆರು ಸಂಸದರು?
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಉದ್ಧವ್ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ 6 ಸಂಸದರು ಸದ್ಯ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣದೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶ್‌ಮುಖ್, ನಾಗೇಶ್ ಪಾಟೀಲ್ ಅಷ್ಟೀಕರ್, ಓಮ್ರಾಜೆ ನಿಂಬಾಳ್ಕರ್, ಭಾವುಸಾಹೇಬ್ ವಾಕಚೌರೆ ಮತ್ತು ಸಂಜಯ್ ಜಾಧವ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ, ಇವರಲ್ಲಿ ಸಂಜಯ್ ದಿನಾ ಪಾಟೀಲ್ ಮತ್ತು ರಾಜುಭಾಯ್ ವಾಜೆ ತಾವು ಉದ್ಧವ್ ಠಾಕ್ರೆ ಅವರೊಂದಿಗೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಾಯ್ದೆಯ ಅಡಿಯಲ್ಲಿ ಅನರ್ಹತೆಯಿಂದ ಪಾರಾಗಲು ಬಂಡಾಯ ಬಣಕ್ಕೆ ಕನಿಷ್ಠ 6 ಸಂಸದರ ಬೆಂಬಲ ಅಗತ್ಯವಿದ್ದು, ಸದ್ಯ ಜಿದ್ದಾಜಿದ್ದಿನ ರಾಜಕೀಯ ತಂತ್ರಗಾರಿಕೆ ಮುಂದುವರಿದಿದೆ.
ವದಂತಿಗೆ ರೆಕ್ಕೆಪುಕ್ಕ ನೀಡಿದ ಗೈರುಹಾಜರಿ
ಕಳೆದ ಭಾನುವಾರ ಮಾತೋಶ್ರೀಯಲ್ಲಿ ಉದ್ಧವ್ ಠಾಕ್ರೆ ಕರೆದಿದ್ದ ಸಭೆಗೆ ಹಾಗೂ ಅದಕ್ಕೂ ಒಂದು ದಿನ ಮುನ್ನ ನಡೆದ ಆದಿತ್ಯ ಠಾಕ್ರೆ ಅವರ ಜನ್ಮದಿನದ ಸಂಭ್ರಮಾಚರಣೆಗೆ ಐದು ಮಂದಿ ಸಂಸದರು ಖುದ್ದಾಗಿ ಹಾಜರಾಗದಿರುವುದು ಅನುಮಾನಗಳಿಗೆ ಕಾರಣವಾಗಿತ್ತು. ಅವರು ಆನ್‌ಲೈನ್ ಮೂಲಕ ಸಭೆಗೆ ಹಾಜರಾಗಿದ್ದರು ಎಂದು ಪಕ್ಷ ಸಮರ್ಥಿಸಿಕೊಂಡಿತ್ತಾದರೂ, ಒಳಗೊಳಗೆ ರಾಜಕೀಯ ದಾಳಗಳು ಉರುಳುತ್ತಿರುವುದು ಈಗ ಜಗಜ್ಜಾಹೀರಾಗಿದೆ. ಮಂಗಳವಾರ ರಾತ್ರಿ ದೆಹಲಿಯಲ್ಲಿರುವ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ನಿವಾಸದಲ್ಲಿ ರಹಸ್ಯ ಸಭೆ ನಡೆದಿದೆ ಎಂಬ ವರದಿಗಳು ಉದ್ಧವ್ ಬಣದಲ್ಲಿ ತಲ್ಲಣ ಸೃಷ್ಟಿಸಿವೆ.
ಇದನ್ನೂ ಓದಿ : “ಐ ಲವ್ ಯೂ ಮಮ್ಮಿ, ಪಾಪಾ” : ನೀಟ್ ಪರೀಕ್ಷೆಯ ಒತ್ತಡಕ್ಕೆ ಕಾರ್ಗಿಲ್ ಯೋಧನ ಪುತ್ರಿ ಬಲಿ!


















