ರಾಜಗಢ (ಮಧ್ಯಪ್ರದೇಶ) : ಪತಿಯೊಬ್ಬ ತನ್ನ ಪತ್ನಿಯನ್ನು ಮನೆಯ ಕಂಬಕ್ಕೆ ಸರಪಳಿಯಿಂದ ಕಟ್ಟಿಹಾಕಿ, ಕಾದ ಕಬ್ಬಿಣದ ರಾಡಿನಿಂದ ಚರ್ಮಕ್ಕೆ ಬರೆ ಎಳೆದು ಚಿತ್ರಹಿಂಸೆ ನೀಡಿದ ಭೀಕರ ಘಟನೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಖಿಲ್ಚಿಪುರದಲ್ಲಿ ಬೆಳಕಿಗೆ ಬಂದಿದೆ. ಆದರೆ, ಈ ನರಕಯಾತನೆಯ ನಡುವೆಯೂ ಹೆದರಿ ಕೂರದ ಮಹಿಳೆ, ಕಲ್ಲು ತೆಗೆದುಕೊಂಡು ಸರಪಳಿಯ ಲಾಕ್ ಮುರಿದು, ಕುತ್ತಿಗೆಯಲ್ಲಿ ಅರ್ಧ ತುಂಡಾದ ಸರಪಳಿ ನೇತಾಡುತ್ತಿದ್ದ ಸ್ಥಿತಿಯಲ್ಲೇ ಕತ್ತಲಲ್ಲಿ 6 ಕಿಲೋಮೀಟರ್ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸಂತ್ರಸ್ತೆಯ ಧೈರ್ಯವನ್ನು ಕಂಡು ಬೆಚ್ಚಿಬಿದ್ದ ಪೊಲೀಸರು ತಕ್ಷಣವೇ ಆರೋಪಿ ಪತಿಯನ್ನು ಬಂಧಿಸಿದ್ದಾರೆ.
ಖಿಲ್ಚಿಪುರ ವ್ಯಾಪ್ತಿಯ ಹಳ್ಳಿಯೊಂದರ ನಿವಾಸಿ ಮಂಗಿಬಾಯಿ ತನ್ವಾರ್ ಎಂಬಾಕೆಯೇ ಈ ಭೀಕರ ದೌರ್ಜನ್ಯಕ್ಕೆ ಒಳಗಾದ ಮಹಿಳೆ. ಜೂ.10ರಂದು ರಾತ್ರಿ ಆಕೆಯ ಪತಿ ಸರ್ದಾರ್ ಸಿಂಗ್ ತನ್ವಾರ್ ಕುಡಿದು ಮನೆಗೆ ಬಂದು ಗಲಾಟೆ ಮಾಡಿದ್ದ. ಮಂಗಿಬಾಯಿ ಇದನ್ನು ವಿರೋಧಿಸಿ ಗಂಡನನ್ನು ತರಾಟೆಗೆ ತೆಗೆದುಕೊಂಡಾಗ ಸಿಟ್ಟಾದ ಆತ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ. ಇದರಿಂದ ರೋಸಿ ಹೋದ ಆಕೆ ಅಂದೇ ರಾತ್ರಿ ಪೊಲೀಸರಿಗೆ ದೂರು ನೀಡಲು ಖಿಲ್ಚಿಪುರ ಠಾಣೆಯತ್ತ ಹೆಜ್ಜೆ ಹಾಕಿದ್ದಳು. ಆದರೆ ಪತಿಯು ಆಕೆಯನ್ನು ಅರ್ಧಕ್ಕೇ ತಡೆದು, ಮತ್ತೆ ತೀವ್ರವಾಗಿ ಥಳಿಸಿ ಮನೆಗೆ ಎಳೆದೊಯ್ದಿದ್ದ. “ನನ್ನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೇಗೆ ಹೋಗುತ್ತೀಯಾ ಎಂದು ನೋಡುತ್ತೇನೆ” ಎಂದು ಸವಾಲು ಹಾಕಿ, ಆಕೆಯ ಕುತ್ತಿಗೆಗೆ ದಪ್ಪನೆಯ ಕಬ್ಬಿಣದ ಸರಪಳಿ ಸುತ್ತಿ ಮನೆಯ ಕಂಬಕ್ಕೆ ಕಟ್ಟಿ ಬೀಗ ಹಾಕಿದ್ದ.
ಕಾದ ರಾಡಿನಿಂದ ಬರೆ ಎಳೆದ ರಾಕ್ಷಸ
ಇಷ್ಟಕ್ಕೇ ನಿಲ್ಲದ ಪತಿಯ ಕ್ರೌರ್ಯ ಮರುದಿನ ಮತ್ತೊಂದು ಹಂತ ತಲುಪಿತ್ತು. ಗ್ಯಾಸ್ ಸ್ಟವ್ ಮೇಲೆ ಕಬ್ಬಿಣದ ರಾಡನ್ನು ಕೆಂಪಾಗುವವರೆಗೆ ಕಾಯಿಸಿದ ಪತಿ, ಮಂಗಿಬಾಯಿಯ ಸೊಂಟ, ತೊಡೆ ಹಾಗೂ ಪೃಷ್ಠದ ಭಾಗಕ್ಕೆ ಬಲವಂತವಾಗಿ ಒತ್ತಿ ಬರೆ ಎಳೆದಿದ್ದ. ಆಕೆ ನೋವಿನಿಂದ ಕಿರುಚಾಡುತ್ತಿದ್ದರೂ ಯಾರೂ ಆಕೆಯ ನೆರವಿಗೆ ಬರಲಿಲ್ಲ. ಸುಮಾರು 24 ಗಂಟೆಗಳ ಕಾಲ ಆಕೆಯನ್ನು ಅನ್ನ-ನೀರಿಲ್ಲದೆ ಕತ್ತಲ ಕೋಣೆಯಲ್ಲಿ ಕೂಡಿಡಲಾಗಿತ್ತು. ಈ ನಡುವೆ ಪತ್ನಿಯ ಮೇಲೆ ಒತ್ತಡ ಹೇರಿ ಪ್ರಕರಣವನ್ನು ಪಂಚಾಯಿತಿಯಲ್ಲೇ ಬಗೆಹರಿಸಿಕೊಳ್ಳಲು ಗ್ರಾಮಸ್ಥರನ್ನು ಕರೆಯಲು ಪತಿ ಸರ್ದಾರ್ ಸಿಂಗ್ ಹೊರಗೆ ಹೋಗಿದ್ದ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಮಂಗಿಬಾಯಿ ತಕ್ಷಣವೇ ಮನೆಯಲ್ಲಿದ್ದ ಕಲ್ಲೊಂದನ್ನು ಎತ್ತಿಕೊಂಡು ಸರಪಳಿಯ ಬೀಗದ ಮೇಲೆ ಸತತವಾಗಿ ಜಜ್ಜತೊಡಗಿದ್ದಾಳೆ. ಹಲವಾರು ಪ್ರಯತ್ನಗಳ ನಂತರ ಕೊನೆಗೂ ಬೀಗ ಮುರಿದು ಆಕೆ ಬಂಧನದಿಂದ ಮುಕ್ತಳಾಗಿದ್ದಾಳೆ.
ಕತ್ತಲ ದಾರಿಯಲ್ಲಿ ಕುತ್ತಿಗೆಯಲ್ಲೇ ಸರಪಳಿ ಹೊತ್ತು ಒಂಟಿ ಪಯಣ
ಬೀಗ ಮುರಿದ ತಕ್ಷಣ ತಡಮಾಡದೆ ಮಂಗಿಬಾಯಿ ಕತ್ತಲಲ್ಲೇ ಠಾಣೆಯತ್ತ ಓಡಲಾರಂಭಿಸಿದ್ದಾಳೆ. ಕುತ್ತಿಗೆಯಲ್ಲಿ ಕಬ್ಬಿಣದ ಸರಪಳಿ ಮತ್ತು ತುಂಡಾದ ಬೀಗ ನೇತಾಡುತ್ತಿದ್ದರೂ ಆಕೆ ಲೆಕ್ಕಿಸದೆ ಕಾಡು-ಮೇಡು, ಮುಳ್ಳಿನ ಹಾದಿಗಳಲ್ಲಿ ಸಾಗಿದ್ದಾಳೆ. ಮುಳ್ಳುಗಳು ಚುಚ್ಚಿ ಕಾಲು ರಕ್ತಸಿಕ್ತವಾಗಿದ್ದರೂ ಆಕೆ ಹೆಜ್ಜೆ ನಿಲ್ಲಿಸಲಿಲ್ಲ. ದಾರಿಯಲ್ಲಿ ಸಿಕ್ಕ ಕೆಲವರು ಆಕೆಯ ಕುತ್ತಿಗೆಯಲ್ಲಿದ್ದ ಸರಪಳಿ ಕಂಡು ಮಾನಸಿಕ ಅಸ್ವಸ್ಥೆ ಎಂದು ಭಾವಿಸಿ ದೂರ ಸರಿದಿದ್ದರು. ಆದರೆ ಒಬ್ಬ ದಾರಿಹೋಕ ಆಕೆಯ ಸ್ಥಿತಿ ಕಂಡು ತಿನ್ನಲು ಆಹಾರ ನೀಡಿದ್ದ. ರಾತ್ರಿ ಸುಮಾರು 10 ಗಂಟೆಗೆ ಕುತ್ತಿಗೆಯಲ್ಲಿ ಸರಪಳಿ ಸಮೇತ ಠಾಣೆಯೊಳಗೆ ಬಂದ ಮಹಿಳೆಯನ್ನು ಕಂಡು ಕರ್ತವ್ಯದಲ್ಲಿದ್ದ ಪೊಲೀಸರೇ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾರೆ.
ಕಿರಾತಕ ಪತಿಯ ಬಂಧನ
ಠಾಣೆಗೆ ಬರುತ್ತಿದ್ದಂತೆ ಮಂಗಿಬಾಯಿ ಕಣ್ಣೀರು ಹಾಕುತ್ತಾ ತನಗಾದ ಅನ್ಯಾಯವನ್ನು ವಿವರಿಸಿದ್ದಾಳೆ. ಪೊಲೀಸರು ತಕ್ಷಣವೇ ಆಕೆಯ ಕುತ್ತಿಗೆಯಲ್ಲಿದ್ದ ಸರಪಳಿಯನ್ನು ತೆಗೆದು ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆಕೆಯ ದೇಹದ ಮೇಲಿನ ಗಂಭೀರ ಗಾಯಗಳು ಮತ್ತು ಸುಟ್ಟ ಗಾಯಗಳು ಸಾಬೀತಾಗಿವೆ. ಖಿಲ್ಚಿಪುರ ಠಾಣಾಧಿಕಾರಿ ಕಮಲ್ ಸಿಂಗ್ ಗೆಹ್ಲೋಟ್ ನೇತೃತ್ವದ ಪೊಲೀಸ್ ತಂಡ ತಕ್ಷಣವೇ ಗ್ರಾಮಕ್ಕೆ ಧಾವಿಸಿ ಆರೋಪಿ ಪತಿ ಸರ್ದಾರ್ ಸಿಂಗ್ ತನ್ವಾರ್‌ನನ್ನು ಬಂಧಿಸಿದೆ.
ಇದನ್ನೂ ಓದಿ : ಮುಂಗಾರು ನಾಪತ್ತೆ ; ಉಪಗ್ರಹ ಚಿತ್ರಗಳಲ್ಲಿ ಕಾಣೆಯಾದ ಮುಂಗಾರು ಮಾರುತ.. ದೇಶಾದ್ಯಂತ ಮಳೆ ಕೊರತೆ ಭೀತಿ!



















