ಬೆಂಗಳೂರು : ಜೀವನ ಶೈಲಿ ಈಗ ಬದಲಾಗಿದೆ. ದಿನೇದಿನೆ ಹಣದುಬ್ಬರ ಜಾಸ್ತಿಯಾಗುತ್ತಿದೆ. ಹಾಗಾಗಿ, ಉದ್ಯೋಗಕ್ಕೆ ಸೇರಿದ ಕೂಡಲೇ ನಿವೃತ್ತಿಗೆ ಯೋಜನೆ ರೂಪಿಸುವ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ, 40 ವರ್ಷ ದಾಟಿದವರಂತೂ ನಿವೃತ್ತಿಯ ಜೀವನವನ್ನು ಸ್ವಾವಲಂಬಿಯಾಗಿ ಕಳೆಯಲು ಈಗಿನಿಂದಲೇ ಹೂಡಿಕೆ ಮಾಡಲು ಶುರು ಮಾಡಬೇಕಿದೆ. ಹೀಗೆ ನಿವೃತ್ತಿಗಾಗಿ ಪ್ಲಾನ್ ಮಾಡುತ್ತಿರುವವರಿಗೆಂದೇ ಎಲ್ಐಸಿಯು ನ್ಯೂ ಜೀವನ್ ಶಾಂತಿ (LIC‘s New Jeevan Shanti) ಎಂಬ ಹೂಡಿಕೆ ಯೋಜನೆಯನ್ನು ಪರಿಚಯಿಸಿದೆ. ಇಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿ ಬಳಿಕ ನಿಮಗೆ ಜೀವನ ಪೂರ್ತಿ ಪಿಂಚಣಿ ದೊರೆಯುತ್ತದೆ.
ಹೌದು, ಎಲ್ಐಸಿಯ ನ್ಯೂ ಜೀವನ್ ಶಾಂತಿ ಯೋಜನೆಯಲ್ಲಿ ಈಗ 10 ಲಕ್ಷ ರೂಪಾಯಿಯನ್ನು ಒಮ್ಮೆಯೇ ಹೂಡಿಕೆ ಮಾಡಿದರೆ, 12 ವರ್ಷಗಳ ಬಳಿಕ ನಿಮಗೆ ಪಿಂಚಣಿ ಲಭಿಸುತ್ತದೆ. ನಿಮಗೆ ಈಗ 48 ವರ್ಷ ವಯಸ್ಸು ಎಂದುಕೊಳ್ಳೋಣ. ನಿವೃತ್ತಿ ಅಂದರೆ, 60ನೇ ವಯಸ್ಸಿನ ನಂತರ ನಿಮಗೆ ಪಿಂಚಣಿ ಲಭಿಸುವಂತೆ ಮಾಡಬೇಕು ಎಂದರೆ ನ್ಯೂ ಜೀವನ್ ಶಾಂತಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ನೀವು ವೈಯಕ್ತಿಕ ಜೀವ ವಿಮಾ ಯೋಜನೆಯಲ್ಲಿ (ಸಿಂಗಲ್ ಲೈಫ್) ಒಮ್ಮೆಯೇ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, 60ನೇ ವರ್ಷದಿಂದ ನಿಮಗೆ ಪ್ರತಿ ವರ್ಷ ಬರೋಬ್ಬರಿ 1,42,500 ರೂಪಾಯಿಗಳ ಪಿಂಚಣಿ ಸಿಗಲು ಶುರುವಾಗುತ್ತದೆ. ಅಂದರೆ, ಮಾಸಿಕ ನಿಮಗೆ 11,400 ರೂಪಾಯಿ ಪಿಂಚಣಿ ಲಭಿಸುತ್ತದೆ. ಜೀವನ ಪೂರ್ತಿ ನಿಮಗೆ ತಿಂಗಳಿಗೆ ಪಿಂಚಣಿ ಲಭಿಸುತ್ತದೆ ಎಂಬುದೇ ಯೋಜನೆಯ ಪ್ರಮುಖ ಅಂಶವಾಗಿದೆ.
ಗಂಡ-ಹೆಂಡತಿಗಾಗಿಯೂ ಇಲ್ಲಿ ಯೋಜನೆ ರೂಪಿಸಲಾಗಿದೆ. ಒಂದು ವೇಳೆ ನೀವು 10 ಲಕ್ಷ ರೂಪಾಯಿಯನ್ನು ದಂಪತಿಗಳಿಗಾಗಿ ಇರುವ ‘ಜಂಟಿ ಜೀವ ವಿಮಾ ಯೋಜನೆ’ ಅಡಿಯಲ್ಲಿ ಹೂಡಿಕೆ ಮಾಡಿದರೆ, 12 ವರ್ಷಗಳ ನಂತರ ನಿಮಗೆ ವರ್ಷಕ್ಕೆ 1,33,400 ರೂಪಾಯಿ ಪಿಂಚಣಿ ಸಿಗುತ್ತದೆ. ಅಂದರೆ, ತಿಂಗಳಿಗೆ ಸುಮಾರು 10,672 ರೂಪಾಯಿ ಪಿಂಚಣಿ ದೊರೆಯುತ್ತದೆ.
ಗಮನಿಸಿ: ಜನಸಾಮಾನ್ಯರಿಗೆ ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಎಲ್ಐಸಿ ಯೋಜನೆಯ ಬಗ್ಗೆ ವರದಿ ಪ್ರಕಟಿಸಿದ್ದೇವೆ. ಇದು ಹೂಡಿಕೆಗೆ ನಾವು ಶಿಫಾರಸು ಮಾಡುತ್ತಿಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮುನ್ನ ತಜ್ಞರನ್ನು ಸಂಪರ್ಕಿಸಿ.
ಇದನ್ನೂ ಓದಿ : ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ : ತನಿಖೆಗೆ SIT ರಚನೆ.. ಉದ್ಯೋಗಿ ಬಂಧನ



















