ಬೆಂಗಳೂರು : ಶೌಚಾಲಯದ ಕಿಟಕಿ ಮೂಲಕ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಮೂವರು ಖತರ್ನಾಕ್ ಖದೀಮರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧನದ ಬಳಿಕ ಆರೋಪಿಗಳ ಹಿನ್ನೆಲೆ ಹಾಗೂ ಅವರು ಕಳ್ಳತನಕ್ಕೆ ಸ್ಕೆಚ್ ಹಾಕಿದ ರೋಚಕ ಕತೆಯನ್ನು ಕೇಳಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಶ್ರೀರಾಮಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ‘ಆರ್ ಎಕ್ಸ್ ನಾಗ’ ಸೇರಿದಂತೆ ಅರ್ಜುನ್ ಅಲಿಯಾಸ್ ರೋಲೆಕ್ಸ್ ಮತ್ತು ರಾಕ್ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಮೇ 6 ರಂದು ನಗರತ್ ಪೇಟೆಯ ಪ್ರಸಿದ್ಧ ‘ಆರುಮ್ ಜ್ಯುವೆಲ್ಲರ್ಸ್’ನ 5ನೇ ಮಹಡಿಯಲ್ಲಿ ಈ ಕಳ್ಳತನ ನಡೆದಿತ್ತು. ಖದೀಮರು ಕಟ್ಟಡದ ಶೌಚಾಲಯದ ಕಿಟಕಿ ಮೂಲಕ ಅತ್ಯಂತ ಚಾಣಾಕ್ಷತನದಿಂದ ಒಳನುಗ್ಗಿ, ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಕಳ್ಳತನ ಮಾಡಿ ಎಸ್ಕೇಪ್ ಆಗುವ ದೃಶ್ಯಗಳು ಸೆರೆಯಾಗಿದ್ದವು.
ಸಿಸಿಟಿವಿ ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ನಗರತ್ ಪೇಟೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುವವರ ಮೇಲೆ ಅನುಮಾನ ಮೂಡಿದೆ. ತಕ್ಷಣವೇ ಶ್ರೀರಾಮಪುರ ನಿವಾಸಿಗಳಾದ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ. ಆರೋಪಿಗಳು ಕೇವಲ ಶೌಚಾಲಯ ಕ್ಲೀನ್ ಮಾಡುತ್ತಿರಲಿಲ್ಲ, ಅದರ ಜೊತೆಗೆ ಚಿನ್ನ ಹುಡುಕುವ ಕಾಯಕವನ್ನೂ ಮಾಡುತ್ತಿದ್ದರು. ನಗರತ್ ಪೇಟೆಯ ಚಿನ್ನದ ಅಂಗಡಿಗಳ ವಾಶ್ರೂಮ್ ಹಾಗೂ ಚರಂಡಿಗಳಿಂದ ಬರುವ ಕೊಳಚೆ ನೀರನ್ನು ಶೇಖರಿಸಿ, ಅದರಲ್ಲಿ ಕೊಚ್ಚಿಹೋಗುತ್ತಿದ್ದ ಸಣ್ಣ ಸಣ್ಣ ವೇಸ್ಟೇಜ್ ಚಿನ್ನದ ಕಣಗಳನ್ನು ಹುಡುಕಿ ಮಾರುವುದು ಇವರ ಕೆಲಸವಾಗಿತ್ತು.
ದಿನಾಲೂ ಕಷ್ಟಪಟ್ಟು ಚಿನ್ನದ ಕಣ ಹುಡುಕುವ ಬದಲಿಗೆ, ಒಂದೇ ಸಲ ದೊಡ್ಡ ಮಟ್ಟದಲ್ಲಿ ಹಣ ಮಾಡಬೇಕೆಂದು ಜ್ಯುವೆಲ್ಲರಿ ಶಾಪ್ನ ಶೌಚಾಲಯದ ಕಿಟಕಿಯ ಮೂಲಕವೇ ಬಂದು ಚಿನ್ನದ ಗಟ್ಟಿ ಕದ್ದಿದ್ದರು. ಬಂಧಿತರ ಪೈಕಿ ನಾಗರಾಜು ಅಲಿಯಾಸ್ ಆರ್ ಎಕ್ಸ್ ನಾಗ ಶ್ರೀರಾಮಪುರದ ರೌಡಿ ಶೀಟರ್ ಆಗಿದ್ದು, ಉಳಿದ ಇಬ್ಬರೂ ಆತನ ಸಹಚರರಾಗಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ ಪೊಲೀಸರು ಸುಮಾರು 12 ಲಕ್ಷ ರೂ. ಮೌಲ್ಯದ 84 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.


















