ಕೋಲ್ಕತ್ತಾ : ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಪಕ್ಷವು ಅಧಿಕೃತವಾಗಿ ಇಬ್ಘಾಗವಾಗುವ ಹಂತಕ್ಕೆ ತಲುಪಿದೆ. ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆಯ ವಿಚಾರವು ಪಕ್ಷದೊಳಗಿನ ಆಂತರಿಕ ಕಲಹವನ್ನು ಬೀದಿಗೆ ತಂದಿದೆ. ಪಕ್ಷದ ಹೈಕಮಾಂಡ್ ಸೂಚಿಸಿರುವ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಎದ್ದಿರುವ ಶಾಸಕರ ಗುಂಪೊಂದು, ಇತ್ತೀಚೆಗಷ್ಟೇ ಪಕ್ಷದಿಂದ ಉಚ್ಚಾಟನೆಗೊಂಡಿರುವ ರೆಬೆಲ್ ನಾಯಕ ರಿತಬ್ರತಾ ಬ್ಯಾನರ್ಜಿ ಅವರನ್ನು ಬೆಂಬಲಿಸಲು ಮುಂದಾಗಿರುವುದು ಟಿಎಂಸಿ ಪಡಸಾಲೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಅಭಿಷೇಕ್ ಬ್ಯಾನರ್ಜಿ ವಿರುದ್ಧ ತಿರುಗಿಬಿದ್ದ ಶಾಸಕರು
ಪಕ್ಷದ ಉನ್ನತ ಮೂಲಗಳ ಪ್ರಕಾರ, ಭಿನ್ನಮತೀಯ ಶಾಸಕರ ಕೋಪ ಮತ್ತು ಅಸಮಾಧಾನ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಮೇಲಲ್ಲ, ಬದಲಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿಯ ವಿರುದ್ಧವಾಗಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ಅವರು ತಮ್ಮ ನಿವಾಸದಲ್ಲಿ ಕರೆದಿದ್ದ ಮಹತ್ವದ ಶಾಸಕರ ಸಭೆಗೆ ಪಕ್ಷದ ಒಟ್ಟು 80 ಶಾಸಕರ ಪೈಕಿ 60 ಶಾಸಕರು ಗೈರುಹಾಜರಾಗುವ ಮೂಲಕ ತಮ್ಮ ಆಕ್ರೋಶವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಇನ್ನು, ಮಮತಾ ಅವರ ಆಪ್ತ, ಶಾಸಕ ಶೋಭಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿಪಕ್ಷ ನಾಯಕನನ್ನಾಗಿ ಘೋಷಿಸಿರುವುದಕ್ಕೆ ಶಾಸಕರಲ್ಲೇ ಭಾರಿ ವಿರೋಧ ವ್ಯಕ್ತವಾಗಿದೆ. ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದರೂ, ಬಹುತೇಕ ಶಾಸಕರು ಈಗ ಇವರ ಬೆನ್ನಿಗೆ ನಿಂತಿರುವುದು ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಹಿ ಫೋರ್ಜರಿ ವಿವಾದ ಮತ್ತು ಸಿಐಡಿ ತನಿಖೆ
ಈ ರಾಜಕೀಯ ಹಗ್ಗಜಗ್ಗಾಟದ ನಡುವೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಟಿಎಂಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಶೋಭಂದೇಬ್ ಚಟ್ಟೋಪಾಧ್ಯಾಯ ಅವರ ಹೆಸರನ್ನು ಶಿಫಾರಸು ಮಾಡಿ ಸ್ಪೀಕರ್ ಅವರಿಗೆ ಸಲ್ಲಿಸಲಾದ ಪತ್ರದಲ್ಲಿ ಕೆಲವು ಶಾಸಕರ ಸಹಿಗಳನ್ನು ನಕಲು (ಫೋರ್ಜರಿ) ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಉಚ್ಚಾಟಿತ ಶಾಸಕರಾದ ರಿತಬ್ರತಾ ಮತ್ತು ಸಂದೀಪನ್ ಅವರೇ ಈ ಕುರಿತು ದೂರು ನೀಡಿದ್ದಾರೆ ಎಂದು ತಿಳಿಸಿರುವ ಮುಖ್ಯಮಂತ್ರಿಗಳು, ಟಿಎಂಸಿ ಭ್ರಷ್ಟಾಚಾರ ಕೇವಲ ಜನಸಾಮಾನ್ಯರಿಗೆ ಸೀಮಿತವಾಗಿಲ್ಲ, ಸ್ವಂತ ಶಾಸಕರ ಸಹಿಯನ್ನೇ ಕದಿಯುವ ಮಟ್ಟಕ್ಕೆ ತಲುಪಿದೆ ಎಂದು ಲೇವಡಿ ಮಾಡಿದ್ದಾರೆ. ಈ ಸಹಿ ವಿವಾದದ ಹಿಂದೆ ಅಭಿಷೇಕ್ ಬ್ಯಾನರ್ಜಿ ಅವರ ಕೈವಾಡವಿದೆ ಎಂದು ಶಾಸಕರು ನೇರ ಆರೋಪ ಮಾಡಿದ್ದು, ಸದ್ಯ ಪಶ್ಚಿಮ ಬಂಗಾಳದ ಸಿಐಡಿ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಟಿಎಂಸಿ ಉಳಿಸಿಕೊಳ್ಳಲು ಕಸರತ್ತು: ಬಿಜೆಪಿ ವ್ಯಂಗ್ಯ
ವಿಧಾನಸಭೆಯಲ್ಲಿ ಪಕ್ಷವು ಸಂಪೂರ್ಣವಾಗಿ ಒಡೆಯುವುದನ್ನು ತಡೆಯಲು ಮತ್ತು ಅಸಮಾಧಾನಿತ ಶಾಸಕರ ಮನವೊಲಿಸಲು ಕೋಲ್ಕತ್ತಾದಲ್ಲಿ ಟಿಎಂಸಿ ಹಿರಿಯ ನಾಯಕರು ಬಿರುಸಿನ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ, ಸಾರ್ವಜನಿಕವಾಗಿ ಪಕ್ಷದ ನಾಯಕರ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಟಿಎಂಸಿಯ ಈ ಆಂತರಿಕ ಬಿಕ್ಕಟ್ಟಿನ ಬಗ್ಗೆ ಲೇವಡಿ ಮಾಡಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಸಚಿವ ದಿಲೀಪ್ ಘೋಷ್, “ಮುಂಬರುವ ದಿನಗಳಲ್ಲಿ ತೃಣಮೂಲ ಕಾಂಗ್ರೆಸ್‌ನಲ್ಲಿ ಕೇವಲ ಅತ್ತೆ (ಮಮತಾ ಬ್ಯಾನರ್ಜಿ) ಮತ್ತು ಸೋದರಳಿಯ (ಅಭಿಷೇಕ್ ಬ್ಯಾನರ್ಜಿ) ಮಾತ್ರ ಉಳಿಯಲಿದ್ದಾರೆ. ಉಳಿದ ಎಲ್ಲಾ ನಾಯಕರು ಪಕ್ಷವನ್ನು ತೊರೆಯಲಿದ್ದಾರೆ” ಎಂದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಶಾಸಕರ ಬಂಡಾಯವನ್ನು ಹತ್ತಿಕ್ಕಿ ಪಕ್ಷವನ್ನು ಒಗ್ಗಟ್ಟಾಗಿ ಇಡುವುದು ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ : ಪೊಲೀಸ್ ಠಾಣೆಯಲ್ಲೇ ASI ಬರ್ತ್‌ಡೇ ಸೆಲೆಬ್ರೇಷನ್ – ನೆಟ್ಟಿಗರ ಆಕ್ರೋಶ!



















