ಬೆಂಗಳೂರು : ಕರ್ನಾಟಕದಾದ್ಯಂತ ಜೂನ್ 5ರವರೆಗೆ ಮಳೆ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಜೊತೆಗೆ ಗುಡುಗು, ಮಿಂಚು ಸಹಿತ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗಂಟೆಗೆ 50ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಜೂನ್ 2ರಂದು ಯಾದಗಿರಿ, ರಾಯಚೂರು, ಕೊಪ್ಪಳ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಇದೇ ವೇಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಬಿರುಗಾಳಿ ಮಳೆಯಾಗುವ ಸಾಧ್ಯತೆ ಇದೆ. ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಿಗೂ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದ್ದು, ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ವಿಶೇಷ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 2ರಂದು ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಜೂನ್ 3ರಿಂದ 5ರವರೆಗೆ ಕರಾವಳಿ ಭಾಗದಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ಜೂನ್ 3ರಂದು ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಯಾದಗಿರಿ, ಹಾಸನ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಜೂನ್ 4ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದ್ದು, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೂ ಭಾರೀ ಮಳೆ ಅಲರ್ಟ್ ಘೋಷಿಸಲಾಗಿದೆ. ಒಳನಾಡು ಕರ್ನಾಟಕದಲ್ಲಿ ಜೂನ್ 5ರವರೆಗೆ ಹಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ ; ದೆಹಲಿಯಲ್ಲಿ ಗರಿಗೆದರಿದ ಸಂಪುಟ ಪುನಾರಚನೆ ಸರ್ಕಸ್ – ಯಾರಿಗೆಲ್ಲ ಮಂತ್ರಿಗಿರಿ? ಇಲ್ಲಿದೆ ಪಟ್ಟಿ


















