ಕಲಬುರಗಿ : ಕರ್ನಾಟಕ ರಾಜಕೀಯದಲ್ಲಿ ಬಹು ದಿನಗಳಿಂದ ಕೇಳಿಬರುತ್ತಿದ್ದ ನಾಯಕತ್ವ ಬದಲಾವಣೆಗೆ ಇದೀಗ ಅಂತಿಮ ಮುದ್ರೆ ಬಿದ್ದಂತಾಗಿದೆ. ಡಿಕೆ.ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ.
ಸಂಘಟನೆ ಮೇಲಿನ ಗಟ್ಟಿಯಾದ ಹಿಡಿತ, ಶಾಸಕರ ಬೆಂಬಲ ಮತ್ತು ಚುನಾವಣಾ ತಂತ್ರದ ಮೂಲಕ ಪಕ್ಷದ ಶಕ್ತಿಕೇಂದ್ರವಾಗಿ ಹೊರಹೊಮ್ಮಿದ ಡಿಕೆ ಶಿವಕುಮಾರ್, ಇದೀಗ ರಾಜ್ಯದ ಅತ್ಯುನ್ನತ ಹುದ್ದೆಯತ್ತ ಹೆಜ್ಜೆ ಇಡುತ್ತಿದ್ದಾರೆ.
ಡಿ.ಕೆ ಶಿವಕುಮಾರ್ ಸಿಎಂ ಆಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್ನಲ್ಲಿ ಪೈಪೋಟಿ ಶುರುವಾಗಿದೆ. ಈ ಬಗ್ಗೆ ಕಲಬುರಗಿಯಲ್ಲಿ ಮಾಹಿತಿ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಸಿಎಂ ಆದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಹಜವಾಗಿ ಬದಲಾವಣೆ ಆಗುತ್ತೆ. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುತ್ತೇವೆ. ಸಿಎಂಗೆ ಉತ್ತಮ ಸಮನ್ವಯ ಇರಬೇಕು, ಅಂತವರನ್ನು ಆಯ್ಕೆ ಮಾಡ್ತೇವೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆಗೆ ಕೇವಲ 24 ತಿಂಗಳು ಮಾತ್ರ ಬಾಕಿಯಿರುವ ಕಾರಣ ಎಲೆಕ್ಷನ್ ಮತ್ತು ಪಕ್ಷ ಕಟ್ಟುವ ದೃಷ್ಟಿಯಿಂದ ಆಯ್ಕೆ ಮಾಡಬೇಕಾಗುತ್ತೆ. ಸ್ಪೀಡ್ ಆಗಿ, ಕಲೆಕ್ಟಿವ್ ಆಗಿ ಎಲ್ಲರನ್ನೂ ಒಗ್ಗಟ್ಟಾಗಿ ತಗೊಂಡು ಹೋಗುವ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾವು ಹುಡುಕಬೇಕಿದೆ. ಜೊತೆಗೆ ಅವರಿಗೆ ಕೋ-ಆಪರೇಟ್ ಮಾಡುವ ಜನರೂ ಇರಬೇಕಾಗುತ್ತದೆ. ಇವೆಲ್ಲವೂ ವಿಚಾರ ಮಾಡಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಿಯ ಶಿವಕುಮಾರ್.. ಡಿಕೆಶಿಗೆ ಭಾವುಕ ಪತ್ರ ಬರೆದು ಸಿದ್ದರಾಮಯ್ಯ ಹೇಳಿದ್ದೇನು?



















