ದರ್ಭಾಂಗ (ಬಿಹಾರ) : ಬಿಹಾರದ ದರ್ಭಾಂಗ ಜಿಲ್ಲೆಯ ಬಹಾದ್ದೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದರಹಾರ್ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಆರಂಭವಾಗಿರುವ ಸರಣಿ ಕಳ್ಳತನದ ಘಟನೆಗಳು ತೀವ್ರ ಆತಂಕ ಸೃಷ್ಟಿಸಿವೆ.
ಕೇವಲ ಎಂಟು ದಿನಗಳ ಅಂತರದಲ್ಲಿ ನಡೆದಿರುವ ಎರಡು ದರೋಡೆ ಪ್ರಕರಣಗಳು ಒಂದೇ ಮಾದರಿಯಲ್ಲಿದ್ದು, ಕಳ್ಳರು ದರೋಡೆ ಮಾಡಿದ ನಂತರ ಮಹಿಳೆಯರ ಜುಟ್ಟು (ಕೂದಲು) ಕತ್ತರಿಸಿ ಪರಾರಿಯಾಗುತ್ತಿದ್ದಾರೆ. ಈ ವಿಚಿತ್ರ ನಡವಳಿಕೆಯಿಂದಾಗಿ ಸ್ಥಳೀಯವಾಗಿ ‘ಬಾಲ್ ಕಟೀಲ್ವಾ’ (ಕೂದಲು ಕತ್ತರಿಸುವ) ಗ್ಯಾಂಗ್ ಸಕ್ರಿಯವಾಗಿದೆ ಎಂಬ ಭೀತಿ ಇಡೀ ಗ್ರಾಮವನ್ನು ಆವರಿಸಿದೆ.
ಮೊದಲ ಘಟನೆಯು ಜುಲೈ 8 ರಂದು ವರದಿಯಾಗಿತ್ತು. ಗ್ರಾಮದ ನಿವಾಸಿ ಡಾ. ಪವನ್ ಕುಮಾರ್ ಮಿಶ್ರಾ ಅವರ ಮನೆಗೆ ಮೇಲ್ಛಾವಣಿಯ ಮೂಲಕ ನುಗ್ಗಿದ ಐದು ಜನ ಅಪರಿಚಿತರು, ಅವರ ಸೊಸೆ ಕರಿಷ್ಮಾ ದೇವಿ (22) ಎಂಬಾಕೆಯ ಕೈಕಾಲುಗಳನ್ನು ಕಟ್ಟಿಹಾಕಿದ್ದಾರೆ. ಬಳಿಕ ಆಕೆಗೆ ಬೆನ್ನಿನ ಭಾಗದಲ್ಲಿ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ. ಮನೆಯೊಳಗಿನ ಕಿರುಚಾಟ ಹೊರಗೆ ಕೇಳಿಸದಿರಲಿ ಎಂದು ಟೆಲಿವಿಷನ್ ಧ್ವನಿಯನ್ನು ಜೋರಾಗಿ ಇಟ್ಟ ಕಳ್ಳರು, ಸುಮಾರು 20 ನಿಮಿಷಗಳ ಕಾಲ ಇಡೀ ಮನೆಯನ್ನು ಜಾಲಾಡಿದ್ದಾರೆ. ಬೀರುಗಳಲ್ಲಿದ್ದ 35,000 ರೂ. ನಗದು ಮತ್ತು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಲ್ಲದೆ, ಹೋಗುವ ಮುನ್ನ ಕರಿಷ್ಮಾ ಅವರ ಜುಟ್ಟನ್ನು ಕತ್ತರಿಸಿ ಪರಾರಿಯಾಗಿದ್ದಾರೆ.
ಶಿಕ್ಷಕನ ಮನೆಯಲ್ಲೂ ಅದೇ ಮಾದರಿಯ ದಾಳಿ
ಈ ಘಟನೆ ನಡೆದು ಕೇವಲ ಒಂದು ವಾರ ಕಳೆಯುವಷ್ಟರಲ್ಲಿ, ಅದೇ ಗ್ರಾಮದ ಶಿಕ್ಷಕ ಸುಮನ್ ಕುಮಾರ್ ಚೌಧರಿ ಎಂಬವರ ಮನೆಯಲ್ಲೂ ಇಂತಹುದೇ ದರೋಡೆ ನಡೆದಿದೆ. ಮಧ್ಯರಾತ್ರಿ ಮನೆಗೆ ನುಗ್ಗಿದ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಯುವತಿಯೊಬ್ಬಳ ಕೂದಲನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಸದ್ಯ ಬಿಹಾರ ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯ (FSL) ಮತ್ತು ತಾಂತ್ರಿಕ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
ತನಿಖೆ ತೀವ್ರಗೊಳಿಸಿದ ಪೊಲೀಸರು
ಎರಡೂ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಪೊಲೀಸರು, ಕೆಲವು ಆಘಾತಕಾರಿ ಸಾಮ್ಯತೆಗಳನ್ನು ಗುರುತಿಸಿದ್ದಾರೆ. ಎರಡು ದರೋಡೆಗಳೂ ಗುರುವಾರದ ರಾತ್ರಿಯೇ ನಡೆದಿವೆ, ಒಂದೇ ಗ್ರಾಮದಲ್ಲಿ ಸಂಭವಿಸಿವೆ ಮತ್ತು ಎರಡರಲ್ಲೂ ಮಹಿಳೆಯರ ಕೂದಲನ್ನು ಕತ್ತರಿಸಲಾಗಿದೆ. ಕಳ್ಳರು ಕೇವಲ ದರೋಡೆ ಮಾಡದೆ ಮಹಿಳೆಯರ ಜುಟ್ಟು ಕತ್ತರಿಸುತ್ತಿರುವುದು ಯಾಕೆ ಎಂಬುದು ಪೊಲೀಸರಿಗೂ ಯಕ್ಷಪ್ರಶ್ನೆಯಾಗಿದೆ. ಈ ವಿಚಿತ್ರ ಘಟನೆಗಳಿಂದಾಗಿ ದರಹಾರ್ ಗ್ರಾಮಸ್ಥರು ತೀವ್ರ ಭಯಭೀತರಾಗಿದ್ದು, ರಾತ್ರಿಯಿಡೀ ಜಾಗರಣೆ ನಡೆಸಿ ಮನೆಗಳಿಗೆ ಕಾವಲು ಕಾಯುತ್ತಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : 58 ಗ್ರಾಂ ಚಿನ್ನಾಭರಣ, 48 ಸಾವಿರ ಹಣ ಕಳವು : 24 ಗಂಟೆಯಲ್ಲೇ ಆರೋಪಿ ಅರೆಸ್ಟ್!



















