ಹಕೀಂಪುರ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಅಕ್ರಮ ವಲಸಿಗರಲ್ಲಿ ನಡುಕ ಆರಂಭವಾಗಿದೆ. ಇಲ್ಲಿನ ಉತ್ತರ 24 ಪರಗಣ ಜಿಲ್ಲೆಯ ಹಕೀಂಪುರ ಗಡಿಯಲ್ಲಿ ತೀವ್ರ ಆತಂಕ ಹಾಗೂ ಅನಿಶ್ಚಿತತೆಯ ವಾತಾವರಣವೂ ನಿರ್ಮಾಣವಾಗಿದೆ. ರಾಜ್ಯಾದ್ಯಂತ ಅಕ್ರಮ ವಲಸಿಗರ ವಿರುದ್ಧ ಅಧಿಕಾರಿಗಳು ಕೈಗೊಂಡಿರುವ ಕಠಿಣ ಕಾನೂನು ಕ್ರಮ ಹಾಗೂ ಬಂಧನ ಕೇಂದ್ರಗಳ ಸ್ಥಾಪನೆಯ ಬೆನ್ನಲ್ಲೇ, ನೂರಾರು ಸಂಖ್ಯೆಯ ದಾಖಲೆರಹಿತ ಬಾಂಗ್ಲಾದೇಶಿ ವಲಸಿಗರು ಸ್ವದೇಶಕ್ಕೆ ಮರಳಲು ಗಡಿಯಲ್ಲಿ ಜಮಾಯಿಸುತ್ತಿದ್ದಾರೆ. ವರ್ಷಗಟ್ಟಲೆ ಭಾರತದಲ್ಲಿ ನೆಲೆಸಿದ್ದ ಕುಟುಂಬಗಳು ಈಗ ತಮ್ಮ ಚೀಲ, ಕಂಬಳಿ, ಗುರುತಿನ ಚೀಟಿಗಳನ್ನು ಹಿಡಿದುಕೊಂಡು, ಮಕ್ಕಳನ್ನು ಎತ್ತಿಕೊಂಡು, ವಯೋವೃದ್ಧರ ಕೈ ಹಿಡಿದುಕೊಂಡು ಗಡಿಯ ಬಳಿ ಕಾಯುತ್ತಿರುವ ದೃಶ್ಯ ಕಂಡುಬರುತ್ತಿದೆ.
ಗಡಿ ಮುಂಚೂಣಿ ಗೇಟ್ ಬಳಿ ಪೊಲೀಸರು ನೋಂದಣಿ ಕೇಂದ್ರವನ್ನು ತೆರೆದಿದ್ದು, ಇಲ್ಲಿಗೆ ಬರುವವರ ಸಂಪೂರ್ಣ ವಿವರಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಇವರ ಬಳಿ ಇರುವ ಬಾಂಗ್ಲಾದೇಶದ ದಾಖಲೆಗಳನ್ನು ಪರಿಶೀಲಿಸಿ ಡೇಟಾಬೇಸ್ ಸಿದ್ಧಪಡಿಸುತ್ತಿದ್ದು, ನಂತರ ಇವರನ್ನು ತಾತ್ಕಾಲಿಕ ತಂಗುದಾಣಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಸೋಮವಾರದಿಂದ ಈವರೆಗೆ 350ಕ್ಕೂ ಹೆಚ್ಚು ಬಾಂಗ್ಲಾದೇಶಿಗರ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಕೊಲ್ಕತ್ತಾದ ನ್ಯೂ ಟೌನ್, ಹತಿಯಾರಾ, ದುಮ್ ದುಮ್ ನಂತಹ ಪ್ರದೇಶಗಳಲ್ಲಿ ದಿನಗೂಲಿ, ಮನೆಗೆಲಸ ಹಾಗೂ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ದಾಖಲೆಗಳಿದ್ದರೂ ಅಮಾನ್ಯ: ಹುಟ್ಟಿದ ದೇಶದಲ್ಲೇ ನಿರಾಶ್ರಿತರಾದ ಯುವಕರು
ಇಲ್ಲಿಗೆ ಬಂದಿರುವ ಅನೇಕ ವಲಸಿಗರು ದಲ್ಲಾಳಿಗಳಿಗೆ ಹಣ ನೀಡಿ ಅಕ್ರಮವಾಗಿ ಭಾರತದೊಳಗೆ ನುಸುಳಿದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಭಾರತದಲ್ಲೇ ಹುಟ್ಟಿ ಬೆಳೆದ ಯುವ ಪೀಳಿಗೆಯ ಪರಿಸ್ಥಿತಿ ಮಾತ್ರ ಅತ್ಯಂತ ದಯನೀಯವಾಗಿದೆ. 2003ರಲ್ಲಿ ಭಾರತದಲ್ಲೇ ಜನಿಸಿದ ಹಿದೋಯ್ ಮುಲ್ಲಾ ಎಂಬ ಯುವಕ ತನ್ನ ಅಳಲು ತೋಡಿಕೊಂಡಿದ್ದು, “ನನ್ನ ಹೆತ್ತವರು ಅನಕ್ಷರಸ್ಥರು, ಅವರಿಗೆ ಯಾವುದೇ ದಾಖಲೆ ಮಾಡಲು ತಿಳಿದಿರಲಿಲ್ಲ. ನನ್ನ ಬಳಿ ಪ್ಯಾನ್ ಕಾರ್ಡ್, ಪಡಿತರ ಚೀಟಿ ಹಾಗೂ ಶಾಲಾ ಪ್ರಮಾಣಪತ್ರಗಳಿದ್ದರೂ ನನ್ನ ವೋಟರ್ ಐಡಿ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನಾನು ಬೆಳೆದಿದ್ದೇ ಈ ಸಂಸ್ಕೃತಿಯಲ್ಲಿ, ಆದರೆ ಈಗ ನಮಗೆ ಪರಿಚಯವೇ ಇಲ್ಲದ ದೇಶಕ್ಕೆ ನಮ್ಮನ್ನು ಕಳುಹಿಸಲಾಗುತ್ತಿದೆ. ಅಲ್ಲಿ ನಮ್ಮ ಭವಿಷ್ಯವೇ ಶೂನ್ಯ,” ಎಂದು ಕಣ್ಣೀರು ಹಾಕಿದ್ದಾನೆ.
ಮತ್ತೊಂದೆಡೆ, ಸ್ಥಳೀಯ ರಾಜಕೀಯ ಪ್ರಭಾವ ಬಳಸಿ ಮತದಾನದ ಹಕ್ಕು ಪಡೆದಿದ್ದ ಮಾಫುಜಾ ಖಾತುನ್ ಎಂಬ ಮಹಿಳೆ, “ನಾವು ಇಷ್ಟು ವರ್ಷಗಳ ಕಾಲ ಇಲ್ಲಿನ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದೇವೆ. ಆದರೆ ಈಗ ನಮ್ಮ ವೋಟರ್ ಐಡಿಗಳನ್ನು ರದ್ದುಗೊಳಿಸಲಾಗಿದೆ. ಸರ್ಕಾರದ ದೃಷ್ಟಿಯಲ್ಲಿ ನಾವು ಪರಕೀಯರು, ಹಾಗಾಗಿ ನಾವು ಬಾಂಗ್ಲಾದೇಶಕ್ಕೆ ಮರಳಲೇಬೇಕಾಗಿದೆ,” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಗುಂಪಿನಲ್ಲಿ ಕೊಲ್ಕತ್ತಾದ ರೈಲುಗಳಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ದೃಷ್ಟಿ ವಿಕಲಚೇತನ ಕುಟುಂಬವೊಂದು ಸೇರಿದ್ದು, ತಮಗೆ ತಕ್ಷಣವೇ ಗಡಿ ದಾಟಲು ಅನುಮತಿ ನೀಡಿ ಎಂದು ಗೋಗರೆಯುತ್ತಿದೆ.
ಸ್ಥಗಿತಗೊಂಡ ‘ಪುಶ್ ಬ್ಯಾಕ್’
ಹಕೀಂಪುರಕ್ಕೆ ಆಗಮಿಸುತ್ತಿರುವ ವಲಸಿಗರನ್ನು ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ತಾತ್ಕಾಲಿಕ ಬಂಧನ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸದ್ಯ ಜಿಲ್ಲೆಯ ತೆಂತುಲಿಯಾದಲ್ಲಿರುವ ‘ಪಥೇರ್ ಸಾಥಿ’ ಕಟ್ಟಡದಲ್ಲಿ ಅತಿ ದೊಡ್ಡ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಅಲ್ಲಿ 116 ಬಾಂಗ್ಲಾದೇಶಿಗರಿಗೆ ಆಶ್ರಯ ನೀಡಲಾಗಿದೆ. ಇವರ ಭದ್ರತೆ, ಊಟ ಹಾಗೂ ವೈದ್ಯಕೀಯ ಆರೈಕೆಗಾಗಿ ಆರೋಗ್ಯ ಇಲಾಖೆಯ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಧಿಕಾರಿಗಳ ಯೋಜನೆಯ ಪ್ರಕಾರ, ಗಡಿಯಲ್ಲಿ ಜಮಾಯಿಸಿದವರನ್ನು ಹಂತ-ಹಂತವಾಗಿ ಬಾಂಗ್ಲಾದೇಶಕ್ಕೆ ‘ಪುಶ್ ಬ್ಯಾಕ್’ (ಗಡಿ ಆಚೆಗೆ ಕಳುಹಿಸುವುದು) ಮಾಡಬೇಕಿತ್ತು. ಆದರೆ, ಪ್ರಸ್ತುತ ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ದಾಖಲೆಗಳಿಲ್ಲದ ವಲಸಿಗರನ್ನು ಸ್ವೀಕರಿಸಲು ಬಾಂಗ್ಲಾದೇಶದ ಅಧಿಕಾರಿಗಳು ಸದ್ಯಕ್ಕೆ ನಿರಾಕರಿಸಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಇಡೀ ಬೆಳವಣಿಗೆಯ ಕುರಿತು ಗಡಿ ಭದ್ರತಾ ಪಡೆ (BSF) ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ : ಚಂದ್ರಯಾನ-2 ಆರ್ಬಿಟರ್‌ನಿಂದ ಅದ್ಭುತ ಆವಿಷ್ಕಾರ :ಚಂದ್ರನ ದಕ್ಷಿಣ ಧ್ರುವದಲ್ಲಿ ಮಂಜುಗಡ್ಡೆ ಪತ್ತೆ!



















