ನಾಸಿಕ್ : ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಸಾಫ್ಟ್‌ವೇರ್ ಕಂಪನಿ ‘ಟಿಸಿಎಸ್‘ (TCS) ಕಚೇರಿಯಲ್ಲಿ ನಡೆದಿದೆ ಎನ್ನಲಾದ ಧಾರ್ಮಿಕ ಮತಾಂತರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಇದೀಗ ಪ್ರಕರಣಕ್ಕೆ ಹೊಸದೊಂದು ಆಘಾತಕಾರಿ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬಳಾದ ನಿದಾ ಖಾನ್ ಮೊಬೈಲ್ ಚಾಟಿಂಗ್‌ಗಳನ್ನು ಪರಿಶೀಲಿಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ‘ಹನಿಯಾ’ ಎಂಬ ಹೆಸರು ಪತ್ತೆಯಾಗಿದೆ. ಈ ಹೆಸರು ಸಂತ್ರಸ್ತೆಯ ಧಾರ್ಮಿಕ ಗುರುತನ್ನು ಬಲವಂತವಾಗಿ ಬದಲಾಯಿಸುವ ವ್ಯವಸ್ಥಿತ ಪಿತೂರಿಗೆ ಸಂಬಂಧಿಸಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ವಾಟ್ಸ್ ಆ್ಯಪ್ ಚಾಟಿಂಗ್‌ನಿಂದ ಹೊರಬಂತು ಮತಾಂತರದ ಸುಳಿವು
ಕೆಲ ವಾರಗಳ ಕಾಲ ತಲೆಮರೆಸಿಕೊಂಡಿದ್ದ ನಿದಾ ಖಾನ್ ಎಂಬಾಕೆಯನ್ನು ಇತ್ತೀಚೆಗಷ್ಟೇ ಔರಂಗಾಬಾದ್‌ನಲ್ಲಿ ಬಂಧಿಸಲಾಗಿದ್ದು, ಸದ್ಯ ಆಕೆಯ ಡಿಜಿಟಲ್ ಸಂಭಾಷಣೆಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ತನಿಖೆಯ ವೇಳೆ ಲಭ್ಯವಾಗಿರುವ ವಾಟ್ಸಾಪ್ ಸಂದೇಶವೊಂದರಲ್ಲಿ ನಿದಾ ಖಾನ್ ತನ್ನ ಸಂಬಂಧಿಕರೊಬ್ಬರ ಜೊತೆ ಮಾತನಾಡುತ್ತಾ, “ನಾನು ಇಂದು ಹನಿಯಾ ಜೊತೆ ಹೊರಗೆ ಹೋಗುತ್ತಿದ್ದೇನೆ…” ಎಂದು ಹೇಳಿದ್ದಾಳೆ. ಅದಕ್ಕೆ ಆಕೆಯ ಸಂಬಂಧಿ “ಯಾರು ಈ ಹನಿಯಾ?” ಎಂದು ಪ್ರಶ್ನಿಸಿದಾಗ, ನಿದಾ “ಅದೇ, ಮತಾಂತರಗೊಂಡವಳು…” ಎಂದು ಉತ್ತರಿಸಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿಯ ಧಾರ್ಮಿಕ ಗುರುತನ್ನು ಬದಲಾಯಿಸಿ ಆಕೆಗೆ ‘ಹನಿಯಾ’ ಎಂದು ಮರುನಾಮಕರಣ ಮಾಡಲಾಗಿತ್ತು ಎಂಬುದಕ್ಕೆ ಈ ಚಾಟಿಂಗ್ ಪ್ರಮುಖ ಸಾಕ್ಷಿ ಎಂದು ಎಸ್‌ಐಟಿ ತಿಳಿಸಿದೆ.
ಉದ್ಯೋಗಿ ಯುವತಿಯಿಂದ ಗಂಭೀರ ಆರೋಪ
ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅವಿವಾಹಿತ ಯುವತಿಯೊಬ್ಬಳ ದೂರಿನ ಮೇರೆಗೆ ಈ ತನಿಖೆ ನಡೆಯುತ್ತಿದ್ದು, ಆರೋಪಿಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಲ್ಲದೆ, ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಈ ಸಂಬಂಧ ಮಾರ್ಚ್ 26 ರಂದು ದಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅತ್ಯಾಚಾರ, ಬಲವಂತದ ಮತಾಂತರ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ (SC/ST Act) ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
1,500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ನಾಸಿಕ್ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕರ್ಣಿಕ್ ಅವರು ಸಹಾಯಕ ಪೊಲೀಸ್ ಕಮಿಷನರ್ ಸಂದೀಪ್ ಮಿತ್ಕೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದರು. ಈ ಎಸ್‌ಐಟಿ ತಂಡವು ಇದೀಗ ನ್ಯಾಯಾಲಯಕ್ಕೆ ಸುಮಾರು 1,500 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಇದರಲ್ಲಿ ಡ್ಯಾನಿಶ್ ಇಜಾಜ್ ಶೇಖ್, ತೌಸಿಫ್ ಬಿಲಾಲ್ ಅತ್ತಾರ್, ನಿದಾ ಇಜಾಜ್ ಖಾನ್ ಮತ್ತು ಮತಿನ್ ಮಜೀದ್ ಪಟೇಲ್ ಎಂಬ ನಾಲ್ವರು ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಪೈಕಿ ಡ್ಯಾನಿಶ್ ಮತ್ತು ತೌಸಿಫ್‌ನನ್ನು ಮೊದಲೇ ಬಂಧಿಸಲಾಗಿತ್ತು.
ಎಐಎಂಐಎಂ ಕಾರ್ಪೊರೇಟರ್‌ಗೆ ತಟ್ಟಿದ ತನಿಖೆಯ ಬಿಸಿ
ಮೇ 7 ರಂದು ಪ್ರಮುಖ ಆರೋಪಿ ನಿದಾ ಖಾನ್‌ನನ್ನು ಛತ್ರಪತಿ ಸಂಭಾಜಿನಗರದ (ಔರಂಗಾಬಾದ್) ನಿವಾಸವೊಂದರಿಂದ ವಶಕ್ಕೆ ಪಡೆಯಲಾಗಿತ್ತು. ಈ ನಿವಾಸವು ಎಐಎಂಐಎಂ (AIMIM) ಪಕ್ಷದ ಕಾರ್ಪೊರೇಟರ್ ಮತಿನ್ ಮಜೀದ್ ಪಟೇಲ್‌ಗೆ ಸೇರಿದ್ದಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಗೆ ಆಶ್ರಯ ನೀಡಿದ ಆರೋಪದ ಮೇಲೆ ಮತಿನ್ ಪಟೇಲ್‌ನನ್ನು ಸಹ ಪ್ರಕರಣದಲ್ಲಿ ಸಹ-ಆರೋಪಿಯನ್ನಾಗಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನಾಸಿಕ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯ ಬಂಧಿತಳಾಗಿರುವ ನಿದಾ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯು ನಾಸಿಕ್ ರೋಡ್ ನ್ಯಾಯಾಲಯದಲ್ಲಿ ಶನಿವಾರ ನಡೆಯಲಿದ್ದು, ಕೋರ್ಟ್ ತೀರ್ಪಿನ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳು ನಿರ್ಧಾರವಾಗಲಿವೆ.
ಇದನ್ನೂ ಓದಿ : ಅವರಿನ್ನೂ ಪಾಠ ಕಲಿತಿಲ್ಲ ಅನ್ನೋದು ವಿಷಾದನೀಯ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಆಕ್ರೋಶ!


















