ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮುರಿನಕಟ್ಟೆ ಮರು ನಿರ್ಮಾಣದ ವಿಚಾರವಾಗಿ ಎರಡು ಸಮುದಾಯಗಳ ನಡುವೆ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕರಾವಳಿಯ ಸೂಕ್ಷ್ಮ ಪ್ರದೇಶದಲ್ಲಿ ಮತ್ತೆ ಕಿಚ್ಚು ಹೊತ್ತಿಸಿದೆ.
ಭಟ್ಕಳದ ವೆಂಕಟಾಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದ ಮುರಿನಕಟ್ಟೆಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಸಾವಿರಾರು ಯುವಕರು ಸೇರಿ ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಭಟ್ಕಳ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಹೊರಡಿಸಲಾಗಿದೆ.
ಮೇ 25ರಿಂದ 27ರವರೆಗೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಐದು ಅಥವಾ ಅದಕ್ಕಿಂದ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಿ ಭಟ್ಕಳ ಎಸಿ ಆದೇಶಿಸಿದ್ದಾರೆ.
ಏನಿದು ವಿವಾದ?
ಮುರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅಗಲೀಕರಣದ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ಆದರೆ, ಹೆದ್ದಾರಿ ಕಾಮಗಾರಿ ಮುಕ್ತಾಯಗೊಂಡ ಬಳಿಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರ್ದಿಯಲ್ಲಿರುವ ಅದೇ ಜಾಗದಲ್ಲಿ ಹಿಂದೂ ಕಾರ್ಯಕರ್ತರು ಕಟ್ಟೆಯನ್ನು ಮರುನಿರ್ಮಾಣ ಮಾಡಿದ್ದರು. ಈ ಮರುನಿರ್ಮಾಣಕ್ಕೆ ಅನ್ಯಕೋಮಿನ ಸಂಘಟನೆಗಳು ಹಾಗೂ ಸಮುದಾಯದ ಪ್ರಮುಖರಿಂದ ತೀವ್ರ ವಿರೋಧ ವ್ಯಕ್ತವಾಗಿ, ಕಟ್ಟೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು.
ಭಾನುವಾರ (ಮೇ 24) ಅನ್ಯಕೋಮು ಸಮುದಾಯದ ನೂರಾರು ಜನರು ಏಕಾಏಕಿ ಮೂರಿನಕಟ್ಟೆ ಜಾಗದಲ್ಲಿ ಜಮಾಯಿಸಿದ್ದರು. ಮರುನಿರ್ಮಾಣಗೊಂಡಿದ್ದ ಕಟ್ಟೆಯನ್ನು ಒಡೆದುರುಳಿಸಲು ಮುಂದಾದಾಗ, ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆಯಲು ಯತ್ನಿಸಿದರು. ಈ ವೇಳೆ ತೀವ್ರ ಘರ್ಷಣೆ ಸಂಭವಿಸಿದ್ದು, ಅನ್ಯಕೋಮಿನವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಘಟನೆಯನ್ನು ಖಂಡಿಸಿ ಭಟ್ಕಳ ಪೊಲೀಸ್ ಠಾಣೆ ಹಾಗೂ ಪೊಲೀಸ್ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಪೊಲೀಸರ ಮೇಲೆ ಹಲ್ಲೆ ನಡೆಸಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಅನ್ಯಕೋಮಿನ ಸಂಘಟನೆಗಳ ಪ್ರಮುಖರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಿವಾದಿತ ಜಾಗದಲ್ಲೇ ಕಟ್ಟೆಯನ್ನು ಮರುನಿರ್ಮಾಣ ಕಾಮಗಾರಿ ಮುಂದುವರಿಸಲು ಹಿಂದೂ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಅಗತ್ಯ ಸಿದ್ಧತೆಗಳನ್ನು ಕೈಗೊಂಡರು. ಆದರೆ, ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಡೆಯಲು ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಪೊಲೀಸರು ಮಧ್ಯಪ್ರವೇಶಿಸಿ, ಕಟ್ಟೆ ನಿರ್ಮಾಣಕ್ಕೆ ಮುಂದಾದ ಹಲವು ಕಾರ್ಯಕರ್ತರನ್ನು ತಡೆದು, ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ ಬರ್ಬರ ಹತ್ಯೆ!



















