ಮುಂಬೈ : ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 2026ರ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಈ ರೋಚಕ ಗೆಲುವಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ರಾಜಸ್ಥಾನ್ ರಾಯಲ್ಸ್ ತನ್ನ ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ತೀವ್ರವಾಗಿ ಕಾಲೆಳೆದಿದೆ.
ಕೇವಲ ಒಂದು ಅಂಕದ ಅಂತರದಿಂದ ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡಕ್ಕೆ ರಾಜಸ್ಥಾನ್ ಫ್ರಾಂಚೈಸಿ ಸರಿಯಾಗಿಯೇ ತಿರುಗೇಟು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಚರ್ಚೆಗಳು ಜೋರಾಗಿವೆ.
ಅರ್ಜುನ್ ಕಪೂರ್ ಮೀಮ್ ಮೂಲಕ ಪಂಜಾಬ್‌ಗೆ ಟಾಂಗ್
ರಾಜಸ್ಥಾನ್ ರಾಯಲ್ಸ್ ತನ್ನ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಹಳೆಯ ಟ್ವೀಟ್ ಒಂದಕ್ಕೆ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ವೈರಲ್ ಮೀಮ್ ಬಳಸಿ ಪ್ರತಿಕ್ರಿಯಿಸಿದೆ. ಎಲ್ಲರೂ ಬಾಗಿಲು ತೆರೆದು ಮನೆಯೊಳಗೆ ಪ್ರವೇಶಿಸುತ್ತಿದ್ದರೆ, ಅರ್ಜುನ್ ಕಪೂರ್ ಮಾತ್ರ ಹೊರಗಡೆಯೇ ನಿಂತು ನೋಡುತ್ತಿರುವ ಹಾಸ್ಯಮಯ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದರರ್ಥ, ಪ್ಲೇಆಫ್ ಬಾಗಿಲು ಪಂಜಾಬ್‌ಗೆ ಮುಚ್ಚಿದೆ ಹಾಗೂ ಉಳಿದ ತಂಡಗಳು ಒಳಪ್ರವೇಶಿಸಿವೆ ಎನ್ನುವುದಾಗಿತ್ತು. ಪಂಜಾಬ್ ಕಿಂಗ್ಸ್ ಈ ಹಿಂದೆ “ಸಾರಿ ಭಾಯ್, ಆಜ್ ನಹೀ!” (ಕ್ಷಮಿಸಿ ಸಹೋದರ, ಇವತ್ತಲ್ಲ!) ಎಂದು ಮಾಡಿದ್ದ ಟ್ವೀಟ್‌ಗೆ ಪ್ರತಿಯಾಗಿ ರಾಜಸ್ಥಾನ್ ಈ ಮೀಮ್ ಅಸ್ತ್ರವನ್ನು ಪ್ರಯೋಗಿಸಿದೆ. ಅಂತಿಮವಾಗಿ ರಾಜಸ್ಥಾನ್ 16 ಅಂಕಗಳೊಂದಿಗೆ ಪ್ಲೇಆಫ್ ತಲುಪಿದರೆ, ಪಂಜಾಬ್ ಕೇವಲ 15 ಅಂಕಗಳೊಂದಿಗೆ ನಿರಾಶಾದಾಯಕವಾಗಿ ಟೂರ್ನಿಯಿಂದ ನಿರ್ಗಮಿಸುವಂತಾಯಿತು.
ಟ್ವಿಟರ್ ‘ವಾರ್’ ಶುರುವಾಗಿದ್ದೇಗೆ?
ಈ ಎರಡು ಫ್ರಾಂಚೈಸಿಗಳ ನಡುವಿನ ಸಾಮಾಜಿಕ ಜಾಲತಾಣದ ಸಮರ ಏಕಾಏಕಿ ಶುರುವಾದದ್ದಲ್ಲ. ಏಪ್ರಿಲ್ 29ರಂದು ಡೊನೊವನ್ ಫೆರೇರಾ ಅವರ ಅತ್ಯುತ್ತಮ ಆಟದಿಂದ ಪಂಜಾಬ್ ವಿರುದ್ಧ ರಾಜಸ್ಥಾನ್ ಜಯಗಳಿಸಿತ್ತು. ಆ ಗೆಲುವಿನ ನಂತರ ರಾಜಸ್ಥಾನ್ ತಂಡ ನಟ ಸಲ್ಮಾನ್ ಖಾನ್ ಅವರ 2014ರ ಹಳೆಯ ಟ್ವೀಟ್ ಒಂದನ್ನು (ಜಿಂಟಾ ಅವರ ತಂಡ ಗೆದ್ದಿತೇ?) ಉಲ್ಲೇಖಿಸಿ, “ಸಾರಿ ಭಾಯ್, ಆಜ್ ನಹೀ!” ಎಂದು ಅಣಕಿಸಿತ್ತು. ಇದಾದ ಬಳಿಕ ಮೇ 1ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋಲನುಭವಿಸಿದಾಗ, ಪಂಜಾಬ್ ಕಿಂಗ್ಸ್ ಇದೇ “ಸಾರಿ ಭಾಯ್, ಆಜ್ ನಹೀ!” ಡೈಲಾಗ್ ಅನ್ನು ಬಳಸಿ ರಾಜಸ್ಥಾನ್ ಕಾಲೆಳೆದಿತ್ತು. ಅಂದು ತಾವು ಆಡದ ಪಂದ್ಯದಲ್ಲೂ ಪಂಜಾಬ್ ಕೆಣಕಿದ್ದಕ್ಕೆ, ರಾಜಸ್ಥಾನ್ ಇದೀಗ ಸರಿಯಾದ ಸಮಯ ನೋಡಿ ಬಡ್ಡಿ ಸಮೇತ ಲೆಕ್ಕ ಚುಕ್ತಾ ಮಾಡಿದೆ.
ಅತಿರೇಕದ ವರ್ತನೆ ಮತ್ತು ತಿರುಗೇಟು ನೀಡಿದ ಕರ್ಮ!
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸಾಮಾಜಿಕ ಜಾಲತಾಣದ ನಿರ್ವಹಣೆ ಸಾಕಷ್ಟು ವಿವಾದಗಳಿಗೆ ಗುರಿಯಾಗಿದೆ. ಅವರ ಅತಿಯಾದ ಆಕ್ರಮಣಕಾರಿ ಹಾಗೂ ಉದ್ಧಟತನದ ಪೋಸ್ಟ್‌ಗಳು ಕ್ರಿಕೆಟ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದವು. ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ದಾದಾಗ, ಪಂಜಾಬ್ ಕಿಂಗ್ಸ್ ಒಂದು ಹೆಜ್ಜೆ ಮುಂದೆ ಹೋಗಿ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ತಂಡಕ್ಕೆ ತಾವು ಉದಾರತೆಯಿಂದ ಒಂದು ಅಂಕವನ್ನು “ದಾನ” ಮಾಡುತ್ತಿರುವುದಾಗಿ ವ್ಯಂಗ್ಯವಾಡಿ ಡ್ಯಾನ್ಸ್ ಮಾಡುವ ವಿಡಿಯೋ ಹಾಕಿತ್ತು. ಅಂದು ತಾವು ಸುಲಭವಾಗಿ ಪ್ಲೇಆಫ್ ತಲುಪುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಪಂಜಾಬ್‌ಗೆ, ಇದೀಗ ಅದೇ ಕಳೆದುಕೊಂಡ ಒಂದು ಅಂಕ ಮುಳುವಾಗಿದೆ.
ಐಪಿಎಲ್‌ನಂತಹ ಬೃಹತ್ ಹಾಗೂ ಕಠಿಣ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಮೈದಾನದೊಳಗಿನ ಪ್ರದರ್ಶನದಷ್ಟೇ ಮೈದಾನದ ಹೊರಗಿನ ನಡವಳಿಕೆಗಳು ಕೂಡ ಪ್ರಮುಖವಾಗುತ್ತವೆ ಎಂಬುದಕ್ಕೆ ಈ ಬಾರಿಯ ಪಂಜಾಬ್ ಕಿಂಗ್ಸ್ ತಂಡದ ವೈಫಲ್ಯವೇ ಬಹುದೊಡ್ಡ ಉದಾಹರಣೆ. ಎದುರಾಳಿಗಳನ್ನು ಕಡೆಗಣಿಸುವ ಹಾಗೂ ಅತಿಯಾದ ಗರ್ವದ ವರ್ತನೆ ತೋರುವ ತಂಡಗಳಿಗೆ ಕ್ರೀಡೆ ತನ್ನದೇ ಆದ ರೀತಿಯಲ್ಲಿ ಪಾಠ ಕಲಿಸುತ್ತದೆ ಎನ್ನುವುದನ್ನು ಈ ಘಟನೆ ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
ಇದನ್ನೂ ಓದಿ : ವಿವಾದ, ಕಳಪೆ ಪ್ರದರ್ಶನ – IPL ಪ್ಲೇಆಫ್‌ನಿಂದ ಹೊರಬಿದ್ದ ಪಂಜಾಬ್ ಕಿಂಗ್ಸ್



















