ಬೆಂಗಳೂರು ; ಬೆಂಗಳೂರು ನಗರಾಭಿವೃದ್ಧಿ ಹಾಗೂ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಮತ್ತೊಂದು ದೊಡ್ಡ ಹೆಜ್ಜೆಯಾಗಿ, ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 52 ಕೇಂದ್ರಗಳಲ್ಲಿ ಮೇ 23ರಂದು “ನನ್ನ ಇ-ಖಾತಾ ನನ್ನ ಹಕ್ಕು” ಅಭಿಯಾನ ನಡೆಯಲಿದೆ. ಕಳೆದ ವಾರ ಆರಂಭವಾದ ಈ ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇದೀಗ ಮತ್ತಷ್ಟು ವೇಗ ಪಡೆದುಕೊಂಡಿದೆ.
ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ D. K. ಶಿವಕುಮಾರ್ ಅವರ ಆಶಯದಂತೆ, ಬೆಂಗಳೂರಿನ 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಹಾಗೂ ಡಿಜಿಟಲೀಕರಣಗೊಳಿಸಲಾಗಿದೆ. ಭೂ ದಾಖಲೆಗಳ ಸುರಕ್ಷತೆ, ಪಾರದರ್ಶಕತೆ ಹಾಗೂ ವಂಚನೆ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ “ಭೂ ಗ್ಯಾರಂಟಿ – 6ನೇ ಗ್ಯಾರಂಟಿ” ಯೋಜನೆಯಡಿ ಈ ಅಭಿಯಾನವನ್ನು ಜಾರಿಗೆ ತಂದಿದೆ.
ಮೊದಲ ಹಂತದಲ್ಲೇ ಉತ್ತಮ ಸ್ಪಂದನೆ
16-05-2026ರಿಂದ ಆರಂಭಗೊಂಡ ಅಭಿಯಾನದಲ್ಲಿ ಇ-ಖಾತಾ, ಹೊಸ ಖಾತಾ, ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಹಾಗೂ ದೋಷ ತಿದ್ದುಪಡಿ ಸೇವೆಗಳಿಗೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು. ಮೊದಲ ಶನಿವಾರವೇ ಒಟ್ಟು 2,939 ಅರ್ಜಿಗಳು ಸ್ವೀಕರಿಸಲ್ಪಟ್ಟವು, 1,242 ಅರ್ಜಿಗಳಿಗೆ ಸ್ಥಳದಲ್ಲಿಯೇ ಅನುಮೋದನೆ ನೀಡಿ ಅಂತಿಮ ಇ-ಖಾತಾ ವಿತರಣೆ ಮಾಡಲಾಯಿತು. ಉಳಿದ 1,697 ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಕೇಂದ್ರದಲ್ಲಿ ದಿನಕ್ಕೆ ಸುಮಾರು 100 ನಾಗರಿಕರಿಗೆ ಸೇವೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿ ಶನಿವಾರ ಸುಮಾರು 5,000 ಮಂದಿಗೆ ಸೇವೆ ಒದಗಿಸುವ ಸಾಮರ್ಥ್ಯವಿದೆ ಎಂದು ಜಿಬಿಎ ಅಯುಕ್ತರು ತಿಳಿಸಿದರು.
ಯಾವ ಸೇವೆಗಳು ದೊರೆಯಲಿವೆ.?
- ಇ-ಖಾತಾ
- ಹೊಸ ಇ-ಖಾತಾ
- ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ
- ಮ್ಯುಟೇಶನ್ ಸೇವೆ
- ಬಾಕಿ ಅರ್ಜಿಗಳ ವಿಲೇವಾರಿ
- ತಿದ್ದುಪಡಿ ಮತ್ತು ಅಹವಾಲು ಪರಿಹಾರ ಸ್ಥಳದಲ್ಲಿಯೇ ಕೈಗೊಳ್ಳಲಾಗುತ್ತದೆ.
ಅಂತಿಮ ಇ-ಖಾತಾ ಸಿದ್ಧವಾಗಿರುವ ನಾಗರಿಕರಿಗೆ ದೂರವಾಣಿ ಹಾಗೂ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಮುದ್ರಿತ ಪ್ರತಿಯನ್ನು ಕೇಂದ್ರದಲ್ಲೇ ಪಡೆದುಕೊಳ್ಳುವ ಅವಕಾಶವೂ ಕಲ್ಪಿಸಲಾಗಿದೆ.
ಬಿ-ಖಾತಾದಿಂದ ಎ-ಖಾತಾಗೆ ವಿಶೇಷ ರಿಯಾಯಿತಿ
ಜಿಬಿಎ ವ್ಯಾಪ್ತಿಯ ಆಸ್ತಿಗಳಿಗೆ 15-05-2026ರಿಂದ 23-08-2026ರವರೆಗೆ 100 ದಿನಗಳ ವಿಶೇಷ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆಗೆ ಪಾವತಿಸಬೇಕಾದ ಶುಲ್ಕವನ್ನು ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5ರಿಂದ ಶೇ.2ಕ್ಕೆ ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸುಮಾರು 7 ಲಕ್ಷ ಆಸ್ತಿ ಮಾಲೀಕರು ಈ ಸೌಲಭ್ಯವನ್ನು ಬಳಸಿಕೊಳ್ಳುವ ನಿರೀಕ್ಷೆಯಿದ್ದು, ತಮ್ಮ ಆಸ್ತಿಯ ಮೌಲ್ಯ ಹೆಚ್ಚಿಸಿಕೊಳ್ಳಲು ಸರ್ಕಾರ ಮನವಿ ಮಾಡಿದೆ.
ಪ್ರತಿ ಶನಿವಾರ ಅಭಿಯಾನ
ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ 100 ದಿನಗಳ ಕಾಲ ಪ್ರತಿ ಶನಿವಾರ ಈ ಅಭಿಯಾನ ನಡೆಯಲಿದೆ. ನಾಗರಿಕರು ತಮ್ಮ ಆಸ್ತಿ ದಾಖಲೆಗಳು, ಗುರುತಿನ ಚೀಟಿ ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಸಮೀಪದ ಕೇಂದ್ರಗಳಿಗೆ ಭೇಟಿ ನೀಡಿ ಸೇವೆ ಪಡೆಯುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ : CE ರಾಜೇಶ್ B.E ಪದವಿ ಪ್ರಮಾಣ ಪತ್ರ ಅಸಲಿಯೋ? ನಕಲಿಯೋ? – ತನಿಖೆಗೆ N.R ರಮೇಶ್ ಆಗ್ರಹ!


















