ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಯೋಜನೆ ಮತ್ತು ಅನುಷ್ಠಾನ ಘಟಕದ ಮುಖ್ಯ ಅಭಿಯಂತರ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಸಂಸ್ಥೆಯ ಮುಖ್ಯ ಪ್ರಧಾನ ವ್ಯವಸ್ಥಾಪಕ-2 ಆಗಿ ಕಾರ್ಯನಿರ್ವಹಿಸುತ್ತಿರುವ ಎಸ್.ವಿ. ರಾಜೇಶ್ ಅವರ ಶೈಕ್ಷಣಿಕ ಅರ್ಹತೆ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿದ್ದು, ಅವರ B.E. ಪದವಿ ಪ್ರಮಾಣ ಪತ್ರದ ಅಸಲೀಯತೆಯನ್ನು ಅಧಿಕೃತವಾಗಿ ಪರಿಶೀಲಿಸಬೇಕೆಂದು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ.

ಎಸ್.ವಿ. ರಾಜೇಶ್ Diploma in Automobile ವ್ಯಾಸಂಗ ಪೂರ್ಣಗೊಳಿಸಿದ್ದು, 30/06/1997 ರಂದು ಪಾಲಿಕೆಯಲ್ಲಿ Work Inspector ಆಗಿ ಸೇವೆ ಆರಂಭಿಸಿದ್ದರು. ಬಳಿಕ 23/08/2000 ರಂದು Junior Engineer ಹುದ್ದೆಗೆ ನೇಮಕಗೊಂಡಿದ್ದರು. ಇದೇ ಅವಧಿಯಲ್ಲಿ ತಾವು BMS Engineering Evening Collegeನಲ್ಲಿ 2000-2001 ಸಾಲಿನಲ್ಲಿ B.E. in Mechanical ಪದವಿ ಪೂರ್ಣಗೊಳಿಸಿರುವುದಾಗಿ ದಾಖಲೆಗಳನ್ನು ಸಲ್ಲಿಸಿ Assistant Engineer ಹುದ್ದೆಗೆ ಪದೋನ್ನತಿ ಪಡೆದಿದ್ದಾರೆ ಎನ್ನಲಾಗಿದೆ.

ಮುಂದುವರಿದು 18/02/2009 ರಂದು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ, 26/11/2010 ರಂದು ಕಾರ್ಯಪಾಲಕ ಅಭಿಯಂತರ, 22/06/2022 ರಂದು ಅಧೀಕ್ಷಕ ಅಭಿಯಂತರ ಹಾಗೂ 02/12/2023 ರಂದು ಪ್ರಭಾರಿ ಮುಖ್ಯ ಅಭಿಯಂತರ ಹುದ್ದೆಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ, Assistant Engineer ಹುದ್ದೆಗೆ ಮುಂಬಡ್ತಿ ನೀಡುವ ಮುನ್ನ ಅವರ B.E. ಪದವಿ ಪ್ರಮಾಣ ಪತ್ರಗಳ ಅಸಲೀಯತೆಯನ್ನು BMS Engineering Evening College ಅಥವಾ Visvesvaraya Technological University ಯಿಂದ ಪರಿಶೀಲನೆ ನಡೆಸಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ತನಿಖೆಗೆ ಆಗ್ರಹಿಸಿದ ಎನ್.ಆರ್. ರಮೇಶ್ ಅವರು, “ಸಿವಿಲ್ ತಾಂತ್ರಿಕತೆಯ ಜ್ಞಾನವಿಲ್ಲದ ಎಸ್.ವಿ. ರಾಜೇಶ್ ಅವರನ್ನು ಎರಡು ಪ್ರಮುಖ ಇಲಾಖೆಗಳ ಆಯಕಟ್ಟಿನ ಹುದ್ದೆಗಳಿಗೆ ನಿಯೋಜಿಸಲಾಗಿದೆ. ಸಾವಿರಾರು ಕೋಟಿ ರೂಪಾಯಿ ಯೋಜನೆಗಳ ಟೆಂಡರ್ ಹಾಗೂ ಅನುಷ್ಠಾನ ಪ್ರಕ್ರಿಯೆಗಳಲ್ಲಿ ಅವರು ಭಾಗಿಯಾಗಿದ್ದಾರೆ. ಆದರೆ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ” ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಎಸ್.ವಿ. ರಾಜೇಶ್ ಅವರು ಯೋಜನೆ ಮತ್ತು ಅನುಷ್ಠಾನ ಘಟಕದ ಮುಖ್ಯ ಅಭಿಯಂತರರಾಗಿ ವಿಶ್ವ ಬ್ಯಾಂಕ್ ನೆರವಿನ ₹2,000 ಕೋಟಿ ಮೊತ್ತದ ಜಲ ಭದ್ರತೆ ಮತ್ತು ವಿಪತ್ತು ನಿರೋಧಕ ಯೋಜನೆ ಹಾಗೂ ₹238.72 ಕೋಟಿ ಮೊತ್ತದ ನಗರ ಪ್ರವಾಹ ಅಪಾಯ ನಿರ್ವಹಣಾ ಯೋಜನೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ BSWMLನಲ್ಲಿ Integrated Solid Waste Management System ಸೇರಿದಂತೆ ಹಲವು ಸಾವಿರ ಕೋಟಿ ರೂಪಾಯಿ ಮೌಲ್ಯದ 33 ಪ್ಯಾಕೇಜ್‌ಗಳ ಟೆಂಡರ್ ಪ್ರಕ್ರಿಯೆಗಳ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿಸಲಾಗಿದೆ.
ಎಸ್.ವಿ. ರಾಜೇಶ್ ಅವರ University Seat Number ಪಡೆದು, ಅವರ ನಿಜವಾದ ವಿದ್ಯಾರ್ಹತೆ ಹಾಗೂ B.E. ಪದವಿ ಪ್ರಮಾಣ ಪತ್ರ ಅಸಲಿಯೋ ಅಥವಾ ನಕಲಿಯೋ ಎಂಬುದರ ಕುರಿತು BMS Engineering Evening College ಹಾಗೂ VTU ದಾಖಲೆಗಳಲ್ಲಿ ಕೂಲಂಕುಶ ಪರಿಶೀಲನೆ ನಡೆಸಬೇಕು. ಜೊತೆಗೆ ಕಾಲೇಜಿನ ಹಾಜರಾತಿ ದಾಖಲೆಗಳನ್ನೂ ಪರಿಶೀಲಿಸಬೇಕು ಎಂದು GBA ಮುಖ್ಯ ಆಯುಕ್ತರು ಹಾಗೂ ಆಡಳಿತ ವಿಭಾಗದ ವಿಶೇಷ ಆಯುಕ್ತರಿಗೆ ಎನ್.ಆರ್. ರಮೇಶ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ಅಬ್ಬರ ; ಸಾಲು ಸಾಲು ಅವಾಂತರ.. ಜನ ಹೈರಾಣು!


















