ನವದೆಹಲಿ : ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ಇಂಧನ ಬಿಕ್ಕಟ್ಟಿನ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಮಿತವ್ಯಯದ ಪಾಠ ಮಾಡುವ ಜೊತೆಗೆ ತಾವೇ ಖುದ್ದಾಗಿ ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ತಮ್ಮ ಅಧಿಕೃತ ಬೆಂಗಾವಲು ಪಡೆಯಲ್ಲಿನ ವಾಹನಗಳ ಸಂಖ್ಯೆಯನ್ನು ಶೇಕಡಾ 50ರಷ್ಟು ಕಡಿತಗೊಳಿಸುವಂತೆ ಪ್ರಧಾನಿ ಮೋದಿ ಆದೇಶಿಸಿದ್ದಾರೆ. ಇಂಧನ ಉಳಿತಾಯ ಮತ್ತು ಆಡಳಿತದಲ್ಲಿ ಮಿತವ್ಯಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆ ಇಡಲಾಗಿದೆ.
ಪ್ರಧಾನಿ ಮೋದಿಯವರ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ರಕ್ಷಣಾ ಪಡೆಗೆ (ಎಸ್‌ಪಿಜಿ) ಸ್ಪಷ್ಟ ಸೂಚನೆ ನೀಡಿರುವ ಅವರು, ಬೆಂಗಾವಲು ವಾಹನಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡುವಂತೆ ತಿಳಿಸಿದ್ದಾರೆ. ಜೊತೆಗೆ, ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಬಳಕೆಯನ್ನು ಹೆಚ್ಚಿಸುವಂತೆಯೂ ನಿರ್ದೇಶನ ನೀಡಿದ್ದಾರೆ.
ಆದರೆ, ಇದಕ್ಕಾಗಿ ಯಾವುದೇ ಹೊಸ ವಾಹನಗಳನ್ನು ಖರೀದಿಸಬಾರದು ಎಂದು ಕಟ್ಟುನಿಟ್ಟಾಗಿ ತಾಕೀತು ಮಾಡಿದ್ದಾರೆ. ಪ್ರಧಾನಿ ಸೂಚನೆಯ ಬೆನ್ನಲ್ಲೇ ಕಾರ್ಯಪ್ರವೃತ್ತವಾಗಿರುವ ಎಸ್‌ಪಿಜಿ, ಅತಿಗಣ್ಯರ ಭದ್ರತಾ ಮಾರ್ಗಸೂಚಿಯಾದ ‘ಬ್ಲೂ ಬುಕ್’ ನಿಯಮಾವಳಿಗಳಿಗೆ ಯಾವುದೇ ಧಕ್ಕೆಯಾಗದಂತೆ ಈ ಬದಲಾವಣೆಗಳನ್ನು ಜಾರಿಗೊಳಿಸಲು ಆರಂಭಿಸಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಮಿತವ್ಯಯದ ಹೆಜ್ಜೆ
ಪ್ರಧಾನಿ ಮಿತವ್ಯಯದ ನಡೆ ಇದೀಗ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೂ ವಿಸ್ತರಿಸಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸೇರಿದಂತೆ ಹಲವು ಸಚಿವರು ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರೆ. ಅನಗತ್ಯ ಪ್ರಯಾಣವನ್ನು ತಪ್ಪಿಸುವ ಮತ್ತು ರಾಷ್ಟ್ರೀಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಪ್ರಧಾನಿಯವರ ಇತ್ತೀಚಿನ ಕರೆಯ ಭಾಗವಾಗಿಯೇ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಜಾಗತಿಕ ಇಂಧನ ಬಿಕ್ಕಟ್ಟು: ರಾಷ್ಟ್ರೀಯ ಜವಾಬ್ದಾರಿಗೆ ಪ್ರಧಾನಿ ಕರೆ
ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದು, ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಆರ್ಥಿಕ ಅನಿಶ್ಚಿತತೆ ಮತ್ತು ಹಣದುಬ್ಬರದ ಒತ್ತಡವನ್ನು ಎದುರಿಸಲು ದೇಶದ ಜನತೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಪ್ರಧಾನಿ ಮೋದಿ ಭಾನುವಾರ ಮತ್ತು ಸೋಮವಾರ ಕರೆ ನೀಡಿದ್ದರು. ನಾಗರಿಕರು ‘ರಾಷ್ಟ್ರೀಯ ಜವಾಬ್ದಾರಿಯುತ’ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಸ್ಥಳೀಯ ಉತ್ಪನ್ನಗಳ ಬಳಕೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದ್ದ ಅವರು, “ಪ್ರತಿಯೊಂದಕ್ಕೂ ನಾವು ಆಮದುಗಳನ್ನೇ ಅವಲಂಬಿಸಿದರೆ ದೇಶ ಪ್ರಗತಿ ಸಾಧಿಸುವುದು ಹೇಗೆ?” ಎಂದು ಪ್ರಶ್ನಿಸಿದ್ದರು.
ವಿದೇಶಿ ಪ್ರವಾಸ, ಚಿನ್ನ ಖರೀದಿಗೆ ಕಡಿವಾಣ ಹಾಕಲು ಮನವಿ
ವಿದೇಶಿ ವಿನಿಮಯದ ಹೊರಹರಿವನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ದೇಶದ ಜನತೆಗೆ ಮಹತ್ವದ ಮನವಿಯೊಂದನ್ನು ಮಾಡಿದ್ದರು. ಮುಂದಿನ ಒಂದು ವರ್ಷದವರೆಗೆ ಅನಗತ್ಯ ಚಿನ್ನದ ಖರೀದಿಯನ್ನು ತಡೆಯುವಂತೆ ಅವರು ಕೋರಿದ್ದರು. ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಸಂರಕ್ಷಿಸುವುದು ಕೂಡ ದೇಶಭಕ್ತಿಯೇ ಎಂದು ಬಣ್ಣಿಸಿರುವ ಪ್ರಧಾನಿ, ವಿದೇಶಿ ಪ್ರವಾಸ ಮತ್ತು ವಿದೇಶಗಳಲ್ಲಿ ನಡೆಯುವ ‘ಡೆಸ್ಟಿನೇಷನ್ ವೆಡ್ಡಿಂಗ್’ಗಳನ್ನು (ವಿವಾಹ ಸಮಾರಂಭ) ತಪ್ಪಿಸುವಂತೆ ಸಲಹೆ ನೀಡಿದ್ದರು. ಬದಲಾಗಿ, ದೇಶೀಯ ಪ್ರವಾಸೋದ್ಯಮ ಮತ್ತು ದೇಶದೊಳಗೇ ಸಮಾರಂಭಗಳನ್ನು ಆಚರಿಸುವುದನ್ನು ಉತ್ತೇಜಿಸುವಂತೆ ದೇಶವಾಸಿಗಳಿಗೆ ವಿನಂತಿಸಿದ್ದರು.
ಇದನ್ನೂ ಓದಿ : ರೈಲ್ವೆ ಇಲಾಖೆಯ IRCTC ಸಂಸ್ಥೆಯಲ್ಲಿ 49 ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ


















