ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿಯ ಜನಕಪುರಿ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಶಾಲೆಗೆ ದಾಖಲಾದ ಕೇವಲ ಎರಡನೇ ದಿನವೇ 3 ವರ್ಷದ ಕಂದಮ್ಮನ ಮೇಲೆ 57 ವರ್ಷದ ಶಾಲಾ ಸಿಬ್ಬಂದಿಯೇ ಅತ್ಯಾಚಾರವೆಸಗಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಈ ಘಟನೆ ಪೋಷಕರಲ್ಲಿ ತೀವ್ರ ಆತಂಕ ಹಾಗೂ ವ್ಯವಸ್ಥೆಯ ವಿರುದ್ಧ ಆಕ್ರೋಶ ಮೂಡಿಸಿದೆ.
ಏ.30ರಂದು ಶಾಲೆಯಿಂದ ಮನೆಗೆ ಮರಳಿದ ಬಾಲಕಿ ತೀವ್ರ ನೋವಿನಿಂದ ಬಳಲುತ್ತಿದ್ದಳು. ಅನುಮಾನಗೊಂಡು ತಾಯಿ ವಿಚಾರಿಸಿದಾಗ, ಶಾಲೆಯ ‘ಕೇರ್‌ಟೇಕರ್’ (ಮೇಲ್ವಿಚಾರಕ) ತನ್ನನ್ನು ಶಾಲೆಯ ಆವರಣದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿರುವುದಾಗಿ ಮಗು ಬಾಯ್ಬಿಟ್ಟಿದೆ. ತಕ್ಷಣವೇ ಎಚ್ಚೆತ್ತ ಪೋಷಕರು ಮೇ 1ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 64(1) ಹಾಗೂ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮಗು ಆರೋಪಿಯನ್ನು ಗುರುತಿಸಿದ ತಕ್ಷಣವೇ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ, ಪ್ರಾಸಿಕ್ಯೂಷನ್‌ನ ತೀವ್ರ ವಿರೋಧದ ನಡುವೆಯೂ ಮೇ 7ರಂದು ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ
ಈ ಗಂಭೀರ ಪ್ರಕರಣದಲ್ಲಿ ಪೊಲೀಸರು ತಕ್ಷಣವೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ದೂರು ನೀಡಲು ಹೋದಾಗ ತಮ್ಮನ್ನು ಹಾಗೂ ಮಗುವನ್ನು ಗಂಟೆಗಟ್ಟಲೆ ಪೊಲೀಸ್ ಠಾಣೆಯಲ್ಲಿ ಕಾಯಿಸಲಾಗಿದೆ ಎಂದು ಅವರು ದೂರಿದ್ದಾರೆ. ಘಟನೆಯಲ್ಲಿ ಶಾಲಾ ಶಿಕ್ಷಕರೊಬ್ಬರ ಕೈವಾಡವೂ ಇರುವ ಶಂಕೆ ವ್ಯಕ್ತಪಡಿಸಿದ್ದು, ವಿಚಾರಣೆ ವೇಳೆ ಅವರನ್ನೂ ಪ್ರಶ್ನಿಸಲಾಗಿದೆ. ಈ ನಡುವೆ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸೌರಭ್ ಭಾರದ್ವಾಜ್ ಅವರು ಆರೋಪಿಗೆ ಜಾಮೀನು ಸಿಕ್ಕಿರುವುದನ್ನು ತೀವ್ರವಾಗಿ ಖಂಡಿಸಿದ್ದು, ಪಶ್ಚಿಮ ವಿಭಾಗದ ಡಿಸಿಪಿ ಅವರು ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂಬ ತಾಯಿಯ ಆರೋಪಕ್ಕೆ ಧ್ವನಿಗೂಡಿಸಿದ್ದಾರೆ.
ಆರೋಪ ತಳ್ಳಿಹಾಕಿದ ಪೊಲೀಸ್ ಇಲಾಖೆ
ಪೋಷಕರು ಹಾಗೂ ಎಎಪಿ ನಾಯಕರ ಆರೋಪಗಳನ್ನು ದೆಹಲಿ ಪೊಲೀಸರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ವಿಚಿತ್ರ ವೀರ್ ಅವರ ಕಚೇರಿ, ಮಗುವಿನ ವೈದ್ಯಕೀಯ ತಪಾಸಣೆ ನಡೆದ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಗುವಿಗೆ ಪೂರಕವಾದ ಹಾಗೂ ಸ್ನೇಹಮಯ ವಾತಾವರಣದಲ್ಲಿಯೇ ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದೆ.
ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಪೊಲೀಸರು ಯಾವುದೇ ಕಿರುಕುಳ ಅಥವಾ ಬೆದರಿಕೆ ಹಾಕಿಲ್ಲ. ವಾಸ್ತವವಾಗಿ, ಡಿಸಿಪಿಯವರು ಸಂತ್ರಸ್ತೆಯ ಪೋಷಕರನ್ನು ಭೇಟಿಯೇ ಆಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ತನಿಖೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಡೆಸಲಾಗುತ್ತಿದ್ದು, ಆರೋಪಿಗೆ ಸಿಕ್ಕಿರುವ ಜಾಮೀನು ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಕಾನೂನು ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇಲಾಖೆ ಭರವಸೆ ನೀಡಿದೆ.
ಇದನ್ನೂ ಓದಿ : ಮದುವೆ ದಿಬ್ಬಣ ಹೊರಟಿದ್ದ ಬಸ್ ಪಲ್ಟಿ – ಹಲವರಿಗೆ ಗಂಭೀರ ಗಾಯ!



















