ಶಿವಮೊಗ್ಗ : ಮದುವೆ ದಿಬ್ಬಣ ಹೊರಟಿದ್ದ ಬಸ್ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಕೊರಕೋಡು ಕ್ರಾಸ್ ಬಳಿ ನಡೆದಿದೆ.
ಸಿದ್ದಾಪುರದಿಂದ ಹಾನಗಲ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಆನವಟ್ಟಿ–ಸೊರಬ ಮಾರ್ಗವಾಗಿ ಸಂಚರಿಸುವ ವೇಳೆ ಅಪಘಾತಕ್ಕೀಡಾಗಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಯ ಏರಿ ಮೇಲೆ ಬಸ್ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದ್ದು, ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ನಲ್ಲಿ ಸುಮಾರು 50 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಆಟವಾಡ್ತಿದ್ದ ಪುಟಾಣಿಗಳ ಮೇಲೆ ಬಿದ್ದ ಗೇಟ್ – 5 ವರ್ಷದ ಕಂದಮ್ಮ ಸ್ಥಳದಲ್ಲೇ ಸಾವು!



















