ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭೀಕರ ರಕ್ತಪಾತ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಬೆಂಬಲಿತ ಉಗ್ರರ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಬಂಧಿತ ಉಗ್ರರ ವಿಚಾರಣೆಯ ವೇಳೆ ದೆಹಲಿಯ ಐತಿಹಾಸಿಕ ದೇವಾಲಯ, ಸೇನಾ ಶಿಬಿರ ಮತ್ತು ಜನನಿಬಿಡ ಹೋಟೆಲ್‌ಗಳ ಮೇಲೆ ದಾಳಿ ನಡೆಸಲು ಸ್ಕೆಚ್ ಹಾಕಿದ್ದ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ.
ದೆಹಲಿ ಪೊಲೀಸರ ವಿಶೇಷ ದಳವು ನಡೆಸಿದ ‘ಗ್ಯಾಂಗ್ ಬಸ್ಟ್ ಆಪರೇಷನ್ 2.0’ ಅಡಿಯಲ್ಲಿ ಬಂಧಿಸಲ್ಪಟ್ಟ ಒಂಬತ್ತು ಮಂದಿ ಆರೋಪಿಗಳು ‘ಶಹಜಾದ್ ಭಟ್ಟಿ ಮಾಡ್ಯೂಲ್’ಗೆ ಸೇರಿದವರಾಗಿದ್ದಾರೆ. ಇವರಲ್ಲಿ ಒಬ್ಬ ಆರೋಪಿಯು ದೆಹಲಿಯ ಐತಿಹಾಸಿಕ ದೇವಾಲಯವೊಂದರ ರಹಸ್ಯ ಪರಿಶೀಲನೆ ನಡೆಸಿ, ಅದರ ಫೋಟೋಗಳನ್ನು ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್‌ಗಳಿಗೆ ರವಾನಿಸಿದ್ದ. ದೇವಾಲಯದ ಬಳಿ ನಿಯೋಜನೆಗೊಂಡಿರುವ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿ ಜನರಲ್ಲಿ ಭೀತಿ ಹುಟ್ಟಿಸುವುದು ಇವರ ಉದ್ದೇಶವಾಗಿತ್ತು. ಅಷ್ಟೇ ಅಲ್ಲದೆ, ಹರ್ಯಾಣದ ಹಿಸಾರ್‌ನಲ್ಲಿರುವ ಸೇನಾ ಶಿಬಿರದ ವಿಡಿಯೋಗಳನ್ನು ಚಿತ್ರೀಕರಿಸಿ ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಹೆದ್ದಾರಿ ಹೋಟೆಲ್‌ನಲ್ಲಿ ಗ್ರೆನೇಡ್ ದಾಳಿಗೆ ಸ್ಕೆಚ್
ದೆಹಲಿ-ಸೋನಿಪತ್ ಹೆದ್ದಾರಿಯಲ್ಲಿರುವ ಅತ್ಯಂತ ಜನಪ್ರಿಯ ಢಾಬಾವೊಂದರ ಮೇಲೆ ಗ್ರೆನೇಡ್ ದಾಳಿ ನಡೆಸಲು ಈ ಉಗ್ರರ ತಂಡ ಯೋಜಿಸಿತ್ತು. ಪ್ರತಿದಿನ ಸಾವಿರಾರು ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುವ ಈ ಢಾಬಾದಲ್ಲಿ ದೊಡ್ಡ ಮಟ್ಟದ ಸಾವು-ನೋವು ಉಂಟುಮಾಡುವುದು ಇವರ ಕುತಂತ್ರವಾಗಿತ್ತು. ಇದರ ಜೊತೆಗೆ ಉತ್ತರ ಪ್ರದೇಶದ ಹಲವು ಪೊಲೀಸ್ ಠಾಣೆಗಳನ್ನೂ ಇವರು ಟಾರ್ಗೆಟ್ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣದ ಮೂಲಕ ಉಗ್ರರ ನೇಮಕ
ಬಂಧಿತ ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ ಸಂಪರ್ಕಕ್ಕೆ ಬಂದಿದ್ದರು. ಇವರನ್ನು ಪ್ರಮುಖ ವ್ಯಕ್ತಿಗಳ ಹತ್ಯೆ ಮತ್ತು ಸರಣಿ ಸ್ಫೋಟಗಳಿಗೆ ಬಳಸಿಕೊಳ್ಳಲು ತರಬೇತಿ ನೀಡಲಾಗುತ್ತಿತ್ತು. ದೆಹಲಿ ಪೊಲೀಸರು ಮಾರ್ಚ್ 31ರಂದೇ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದರು. ಗುರುವಾರ ವಿವಿಧ ರಾಜ್ಯಗಳಲ್ಲಿ ನಡೆಸಿದ ದಾಳಿಯಲ್ಲಿ ಒಂಬತ್ತು ಮಂದಿ ಉಗ್ರರನ್ನು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದಂತಾಗಿದೆ. ದೆಹಲಿ ಪೊಲೀಸರು ಈಗ ಈ ಜಾಲದ ಉಳಿದ ಕೊಂಡಿಗಳಿಗಾಗಿ ಶೋಧ ಮುಂದುವರಿಸಿದ್ದು, ದೇಶದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ : ಕೊನೆಗೂ ಜಿಬಿಎ ಚುನಾವಣೆಗೆ ಮುಹೂರ್ತ – ಯಾವಾಗ ಗೊತ್ತಾ ಎಲೆಕ್ಷನ್?



















