ಮೈಸೂರು : ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಜಿಲ್ಲೆಯ ಗಾಂಧಿನಗರ ಭಾಗದಲ್ಲಿ ನಡೆದಿದ್ದು, ಎರಡು ಬೈಕ್ ಹಾಗೂ ಒಂದು ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ನಿನ್ನೆ ತಡರಾತ್ರಿ ನಡೆದಿದ್ದು, ಮನೆಯ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಬೈಕ್‌ಗಳನ್ನು ಗುರಿಯಾಗಿಸಿಕೊಂಡ ಇಬ್ಬರು ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹೊತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ವಾಹನಗಳು ಸುಟ್ಟು ಭಸ್ಮವಾಗಿದೆ.
ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿಗಳ ಕೃತ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಮೊದಲು ಮನೆಯ ಮುಂಭಾಗ ಯಾರಾದರೂ ಇದ್ದಾರೆಯೇ ಎಂದು ಪರಿಶೀಲಿಸಿದ ಕಿಡಿಗೇಡಿಗಳು, ಬಳಿಕ ಬೈಕ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಕಂಡುಬಂದಿದೆ. ನಂತರ ಬೆಂಕಿ ಇತರೆ ವಾಹನಗಳಿಗೂ ವ್ಯಾಪಿಸಿ ದೊಡ್ಡ ಅವಘಡ ಸಂಭವಿಸಿದೆ.
ಬೆಂಕಿಯ ತೀವ್ರತೆಗೆ ಎರಡು ಬೈಕ್‌ಗಳು ಹಾಗೂ ಒಂದು ಕಾರು ಸಂಪೂರ್ಣ ಸುಟ್ಟು ಕರಕಲಾಗಿವೆ. ವಾಹನ ಮಾಲೀಕರು ಬೆಳಗ್ಗೆ ಘಟನೆ ಗಮನಿಸಿ ಬೆಚ್ಚಿಬಿದ್ದಿದ್ದಾರೆ. ಸ್ಥಳೀಯರು ಕೂಡ ಆತಂಕ ವ್ಯಕ್ತಪಡಿಸಿದ್ದು, ಈ ರೀತಿಯ ಕೃತ್ಯಗಳಿಂದ ಭದ್ರತೆ ಪ್ರಶ್ನಾರ್ಹವಾಗಿದೆ ಎಂದು ಹೇಳಿದ್ದಾರೆ.
ಸದ್ಯ ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ತೀವ್ರಗೊಳಿಸಲಾಗಿದೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಹುಡುಕಾಟ ಮುಂದುವರಿದಿದೆ.
ಇದನ್ನೂ ಓದಿ : ಕಾರ್ಪೊರೇಟ್ ಜಿಹಾದ್ ಕೇಸ್ ; ಖಾಕಿ ಪಡೆಯ ‘ಸೈಲೆಂಟ್ ಆಪರೇಷನ್’ ಸಫಲ.. ನಿದಾ ಖಾನ್ ಅರೆಸ್ಟ್!



















