ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಭುಗಿಲೆದ್ದಿರುವ ಚುನಾವಣೋತ್ತರ ಹಿಂಸಾಚಾರ ಎರಡನೇ ದಿನವೂ ಮುಂದುವರಿದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊಲೆ, ಬೆಂಕಿ ಹಚ್ಚುವಿಕೆ ಹಾಗೂ ಕಚೇರಿಗಳ ಧ್ವಂಸ ಪ್ರಕರಣಗಳು ವರದಿಯಾಗುತ್ತಿದ್ದು, ಈವರೆಗೆ ಮೂವರು ಸಾವನ್ನಪ್ಪಿದ್ದಾರೆ.

ಈ ಹಿಂಸಾಚಾರದ ಹೊಣೆಯನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಪರಸ್ಪರರ ಮೇಲೆ ಹೊರಿಸಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಚುನಾವಣಾ ಆಯೋಗವು ಹಿಂಸಾಚಾರವನ್ನು ಮಟ್ಟಹಾಕಲು ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಅಸನ್ಸೋಲ್ ಕೈಗಾರಿಕಾ ಪ್ರದೇಶ ಸೇರಿದಂತೆ ರಾಜ್ಯದ ಹಲವೆಡೆ ಮಂಗಳವಾರ ರಾತ್ರಿ ಟಿಎಂಸಿ ಕಚೇರಿಗಳ ಮೇಲೆ ದಾಳಿ ಮತ್ತು ಬೆಂಕಿ ಹಚ್ಚಿದ ಆರೋಪಗಳು ಕೇಳಿಬಂದಿವೆ. ಕಚೇರಿಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಪಕ್ಕದಲ್ಲೇ ಇದ್ದ ಬೇಕರಿಗೂ ಬೆಂಕಿ ವ್ಯಾಪಿಸಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಾಣಿಗಂಜ್, ಬರ್ನ್‌ಪುರ್ ಮತ್ತು ಬಾರಾಬನಿ ಮುಂತಾದ ಪ್ರದೇಶಗಳಲ್ಲಿ ಟಿಎಂಸಿ ಕಚೇರಿಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ ಎಂಬ ವರದಿಗಳೂ ಬಂದಿವೆ.

ಟಾಲಿಗಂಜ್, ಕಸ್ಬಾ, ಪಾನಿಹಟಿ ಸೇರಿದಂತೆ ಹಲವೆಡೆ ಟಿಎಂಸಿ ನಾಯಕರ ಕಚೇರಿಗಳನ್ನು ಗುಂಪೊಂದು ಧ್ವಂಸಗೊಳಿಸಿದೆ ಹಾಗೂ ಪೋಸ್ಟರ್‌ಗಳನ್ನು ಹರಿದು ಹಾಕಲಾಗಿದೆ. ಮಾಂಸಾಹಾರಿ ಮತ್ತು ಬಿರಿಯಾನಿ ಹೋಟೆಲ್ ಮಾಲೀಕರಿಗೆ ಅಂಗಡಿ ಮುಚ್ಚುವಂತೆ ಅಥವಾ ಬೇರೆಡೆ ತೆರಳುವಂತೆ ಬಿಜೆಪಿ ಬೆಂಬಲಿತ ಗೂಂಡಾಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಟಿಎಂಸಿ ಗಂಭೀರ ಆರೋಪ ಮಾಡಿದೆ.
ರಕ್ತಪಾತಕ್ಕೆ ಮೂವರು ಬಲಿ, ಪೊಲೀಸರ ಮೇಲೂ ದಾಳಿ
ಈ ರಾಜಕೀಯ ಸಂಘರ್ಷದಲ್ಲಿ ಇಬ್ಬರು ರಾಜಕೀಯ ಕಾರ್ಯಕರ್ತರು ಸೇರಿ ಒಟ್ಟು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ನ್ಯೂಟೌನ್ ಪ್ರದೇಶದಲ್ಲಿ ಬಿಜೆಪಿ ವಿಜಯೋತ್ಸವ ಮೆರವಣಿಗೆ ಸಾಗುತ್ತಿದ್ದಾಗ ನಡೆದ ವಾಗ್ವಾದದಲ್ಲಿ ಬಿಜೆಪಿ ಕಾರ್ಯಕರ್ತ ಮಧು ಮಂಡಲ್ ಎಂಬವರನ್ನು ಟಿಎಂಸಿ ಕಾರ್ಯಕರ್ತರು ಥಳಿಸಿ ಕೊಂದಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಬೀರ್‌ಭೂಮ್‌ನ ನಾನೂರ್‌ನಲ್ಲಿ ಟಿಎಂಸಿ ಕಾರ್ಯಕರ್ತ ಅಬೀರ್ ಶೇಖ್ ಅವರನ್ನು ಗುಂಪೊಂದು ಕೊಚ್ಚಿ ಕೊಲೆ ಮಾಡಿದೆ.
ಈ ನಡುವೆ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ತಡರಾತ್ರಿ ಗಸ್ತು ತಿರುಗುತ್ತಿದ್ದ ನ್ಯಾಜತ್ ಪೊಲೀಸ್ ಠಾಣೆಯ ಅಧಿಕಾರಿ ಭರತ್ ಪುರಕೈತ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳು ಹಾಗೂ ಇಬ್ಬರು ಕೇಂದ್ರ ಪಡೆ ಯೋಧರ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಈ ಅಹಿತಕರ ಘಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಬಂಗಾಳ ಬಿಜೆಪಿ ಘಟಕ, ಪಕ್ಷದ ಹೆಸರನ್ನು ಬಳಸಿ ಕಿಡಿಗೇಡಿಗಳು ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ಲೂಟಿ, ಹಿಂಸಾಚಾರದಲ್ಲಿ ತೊಡಗುವ ಯಾವುದೇ ಕಾರ್ಯಕರ್ತನನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ತಾರಕೇಶ್ವರದ ನೂತನ ಬಿಜೆಪಿ ಶಾಸಕ ಸಂತು ಪಾನ್ ಅವರು, ಕೇಸರಿ ಬಣ್ಣ ಎರಚಿ ಜನರ ಮೇಲೆ ಹಲ್ಲೆ ನಡೆಸುತ್ತಿರುವವರನ್ನು ತಕ್ಷಣವೇ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಚುನಾವಣಾ ಆಯೋಗದಿಂದ ‘ಶೂನ್ಯ ಸಹಿಷ್ಣುತೆ’ ಆದೇಶ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಮಧ್ಯಪ್ರವೇಶಿಸಿದೆ. ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (ಸಿಎಪಿಎಫ್) ಸ್ಪಷ್ಟ ನಿರ್ದೇಶನ ನೀಡಿರುವ ಆಯೋಗ, ಚುನಾವಣೋತ್ತರ ಹಿಂಸಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ. ಈ ವಿಚಾರದಲ್ಲಿ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ರವಾನಿಸಿದೆ. ಆತಂಕಿತ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ : ತಮಿಳುನಾಡು ರಾಜಕಾರಣದಲ್ಲಿ ಹೊಸ ಟ್ವಿಸ್ಟ್ : ವಿಜಯ್ ‘ಟಿವಿಕೆ’ಗೆ ಕಾಂಗ್ರೆಸ್ ಷರತ್ತುಬದ್ಧ ಬೆಂಬಲ



















